ADVERTISEMENT

ಮೀನು ಸಾಕಾಣಿಕೆ ಹೆಚ್ಚು ಲಾಭದಾಯಕ: ಡಾ. ಸುನೀಲಕುಮಾರ ಎನ್.ಎಂ.

ಮೀನು ಸಾಕಾಣಿಕೆ ತರಬೇತಿ ಉದ್ಘಾಟನೆ: ಡಾ. ಸುನೀಲಕುಮಾರ ಎನ್.ಎಂ. ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 15:00 IST
Last Updated 11 ಜನವರಿ 2022, 15:00 IST
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆರಂಭವಾದ ಒಳನಾಡು ಮೀನು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಖೆಯ ಬಸವಕಲ್ಯಾಣ ಸಹಾಯಕ ನಿರ್ದೇಶಕ ಡಾ. ಗೌತಮ ಉದ್ಘಾಟಿಸಿದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಮಲ್ಲೇಶ, ಡಾ. ಸುನೀಲಕುಮಾರ ಎನ್.ಎಂ, ಡಾ. ರಾಜೇಶ್ವರಿ ಇದ್ದರು
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆರಂಭವಾದ ಒಳನಾಡು ಮೀನು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಖೆಯ ಬಸವಕಲ್ಯಾಣ ಸಹಾಯಕ ನಿರ್ದೇಶಕ ಡಾ. ಗೌತಮ ಉದ್ಘಾಟಿಸಿದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಮಲ್ಲೇಶ, ಡಾ. ಸುನೀಲಕುಮಾರ ಎನ್.ಎಂ, ಡಾ. ರಾಜೇಶ್ವರಿ ಇದ್ದರು   

ಜನವಾಡ: ಮಿಶ್ರ ಮೀನು ಸಾಕಾಣಿಕೆ ಹೆಚ್ಚು ಲಾಭದಾಯಕವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್. ಎಂ. ಹೇಳಿದರು.

ಇಲ್ಲಿಗೆ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ರೈತರು, ಗ್ರಾಮೀಣ ಯುವಕ, ಯುವತಿಯರಿಗೆ ಆಯೋಜಿಸಿರುವ ಒಳನಾಡು ಮೀನು ಸಾಕಾಣಿಕೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃಷಿಯಂತೆ ಮೀನು ಸಾಕಾಣಿಕೆಯನ್ನೂ ಕಡಿಮೆ ಖರ್ಚಿನಲ್ಲಿ ಮಾಡಬಹುದು. ಒಳನಾಡು ಮೀನುಗಾರಿಕೆ ಈಗಾಗಲೇ ಅಧಿಕ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ADVERTISEMENT

ಒಳನಾಡು ಮೀನುಗಾರಿಕೆ ನಂಬಿ ಲಕ್ಷಾಂತರ ಜನ ಬದುಕು ಸಾಗಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಕೆರೆ, ತಡೆ ಅಣೆಕಟ್ಟೆ, ಕೃಷಿ ಹೊಂಡ, ಕೊಳವೆಬಾವಿ ಆಧಾರಿತ ನೀರು ಸಂಗ್ರಹ ಕೊಳಗಳು, ತೆರೆದ ಬಾವಿಗಳು, ತಗ್ಗು ಪ್ರದೇಶದ ಹಳ್ಳ ಕೊಳ್ಳಗಳಲ್ಲಿ ಜಲ ಕೃಷಿ ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.

ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೈತರು, ಯುವಕ- ಯುವತಿಯರು ತರಬೇತಿಯ ಪ್ರಯೋಜನ ಪಡೆಯಬೇಕು ಎಂದರು.

ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೀನುಗಾರಿಕೆ ಇಲಾಖೆಯ ಬಸವಕಲ್ಯಾಣ ಸಹಾಯಕ ನಿರ್ದೇಶಕ ಡಾ. ಗೌತಮ ಮಾತನಾಡಿ, ಜಿಲ್ಲೆಯಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತಮ ವಾತಾವರಣ ಇದೆ ಎಂದು ಹೇಳಿದರು.

ಕೃಷಿ ವಿಜ್ಞಾನಿ ಡಾ. ಅಕ್ಷಯಕುಮಾರ ಮಾತನಾಡಿ, ಮೀನು ಉತ್ತಮ ಪೌಷ್ಟಿಕ ಆಹಾರವಾಗಿದೆ. ಸ್ನಾಯು ಸಮಸ್ಯೆ, ದೃಷ್ಟಿ ದುರ್ಬಲತೆಯನ್ನು ಕಡಿಮೆಗೊಳಿಸುತ್ತದೆ. ಮೀನು ಸಾಕಣೆಯಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಡಾ. ಜಾನ್ವಿ ಮೀನು ತಳಿ, ಮೀನು ಹೊಂಡಗಳ ನಿರ್ಮಾಣ, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಮೀನುಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ. ಮಲ್ಲೇಶ ಅವರು ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಗೃಹ ವಿಜ್ಞಾನಿ ಡಾ. ರಾಜೇಶ್ವರಿ ವಂದಿಸಿದರು.

ರಾಷ್ಟ್ರೀಯ ಮೀನು ಸಾಕಾಣಿಕೆ ಅಭಿವೃದ್ಧಿ ನಿಗಮ ಹಾಗೂ ಹೈದರಾಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣಾ ಸಂಸ್ಥೆ ಪ್ರಾಯೋಜಕತ್ವದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.