ADVERTISEMENT

ಬಿಡುವು ಕೊಟ್ಟ ಮಳೆ; ಪ್ರವಾಹ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:50 IST
Last Updated 30 ಸೆಪ್ಟೆಂಬರ್ 2025, 2:50 IST
ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದಲ್ಲಿ ಪ್ರವಾಹ ಬಂದಿರುವುದರಿಂದ ಗ್ರಾಮದಲ್ಲೆಲ್ಲಾ ನೀರು ನುಗ್ಗಿ ಜನ ಓಡಾಡಲು ಸಮಸ್ಯೆ ಎದುರಿಸುತ್ತಿದ್ದಾರೆ
ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದಲ್ಲಿ ಪ್ರವಾಹ ಬಂದಿರುವುದರಿಂದ ಗ್ರಾಮದಲ್ಲೆಲ್ಲಾ ನೀರು ನುಗ್ಗಿ ಜನ ಓಡಾಡಲು ಸಮಸ್ಯೆ ಎದುರಿಸುತ್ತಿದ್ದಾರೆ   

ಬೀದರ್‌: ಹಲವಾರು ದಿನಗಳ ನಂತರ ಜಿಲ್ಲೆಯಾದ್ಯಂತ ಸೋಮವಾರ ಮಳೆ ಬಿಡುವು ಕೊಟ್ಟಿತು.

ಸೋಮವಾರ ಬೆಳಿಗ್ಗೆ 6.30ಕ್ಕೆ ಸೂರ್ಯನ ಕಿರಣಗಳು ಭೂಮಿ ಚುಂಬಿಸಿದವು. ಬಿಸಿಲು ಕಂಡ ಜನರ ಮೊಗದಲ್ಲಿ ಸಂತಸ ಅರಳಿತು. ಅನೇಕ ದಿನಗಳಿಂದ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಹಗಲು–ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಜನ ಬೇಸತ್ತು ಹೋಗಿದ್ದರು. ಇಡೀ ದಿನ ದಟ್ಟ ಕಾರ್ಮೋಡ ಕವಿದಿರುತ್ತಿತ್ತು. ಮಳೆ ಯಾವಾಗ ಬಿಡುವ ಕೊಡುತ್ತದೆ ಎಂದು ತಮ್ಮನ್ನು ತಾವೇ ಜನ ಪ್ರಶ್ನಿಸಿಕೊಳ್ಳುತ್ತಿದ್ದರು. ಅವರ ನಿರೀಕ್ಷೆಗೆ ಸೋಮವಾರ ಕಾಲ ಕೂಡಿ ಬಂದಿತು.

ನಗರದ ಪ್ರಮುಖ ರಸ್ತೆಗಳು, ಉದ್ಯಾನಗಳು, ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡು ಬಂದರು. ಬೀದರ್‌ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಲಿಲ್ಲ. ಮಳೆಯಾಗದಿದ್ದರೂ ಸಹ ಪ್ರವಾಹ ಯಥಾಸ್ಥಿತಿ ಇದೆ.

ADVERTISEMENT

ಮಹಾರಾಷ್ಟ್ರದ ಧನೆಗಾಂವ್‌, ಮಸಲಗಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಮಾಂಜ್ರಾ ನದಿ ಈಗಲೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಜಿಲ್ಲೆಯ ಭಾಲ್ಕಿ, ಕಮಲನಗರ, ಹುಲಸೂರ, ಔರಾದ್‌ ಹಾಗೂ ಬೀದರ್‌ ತಾಲ್ಲೂಕಿನ ಹಲವು ಗ್ರಾಮಗಳ ನಡುವೆ ಈಗಲೂ ಸಂಪರ್ಕ ಕಡಿತಗೊಂಡಿದೆ. ರೈತರ ಜಮೀನುಗಳೆಲ್ಲಾ ಜಲಾವೃತಗೊಂಡಿವೆ.

ಕಾರಂಜಾ ಜಲಾಶಯ ಕೂಡ ಭರ್ತಿಯಾಗಿದ್ದು, ಐದು ಕ್ರಸ್ಟ್‌ಗೇಟ್‌ಗಳನ್ನು ತೆರೆದು ಸೋಮವಾರ ನದಿಗೆ 12 ಸಾವಿರ ಕ್ಯುಸೆಕ್‌ ನೀರು ಹರಿಸಲಾಯಿತು. ಇದರಿಂದ ಮಾಂಜ್ರಾ ಮತ್ತಷ್ಟು ಉಕ್ಕೇರುವಂತೆ ಆಗಿದೆ. ರೈತರ ಕಣ್ಣೆದುರಲ್ಲೇ ಅಳಿದುಳಿದ ಬೆಳೆ ಕೂಡ ನೀರಲ್ಲಿ ಕೊಳೆಯುತ್ತಿದೆ.

ಬೀದರ್‌ ತಾಲ್ಲೂಕಿನ ಇಸ್ಲಾಂಪೂರದಲ್ಲಿ ಪ್ರವಾಹದಿಂದ ಜಮೀನುಗಳೆಲ್ಲಾ ಜಲಾವೃತವಾಗಿರುವುದು
ಬೀದರ್‌ ತಾಲ್ಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ಪ್ರವಾಹ ಬಂದಿದ್ದು ರಸ್ತೆ ಜಲಾವೃಗೊಂಡಿರುವುದರಿಂದ ಯುವಕನೊಬ್ಬ ಬೈಕ್‌ ತಳ್ಳಿಕೊಂಡು ಹೋದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.