ADVERTISEMENT

ಜನಪದ ಸಂಸ್ಕೃತಿ ನಮ್ಮ ಮೂಲ ಬೇರು: ಶಂಭುಲಿಂಗ ಕಾಮಣ್ಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:27 IST
Last Updated 17 ಜನವರಿ 2026, 6:27 IST
ಭಾಲ್ಕಿ ಪಟ್ಟಣದ ನಿರ್ಮಲಾ ಹಲಮಂಡಗೆ ಕ್ರಿಯೇಟಿವ್ ಸ್ಟಡೀಸ್‌ ಶಾಲೆಯಲ್ಲಿ ಶುಕ್ರವಾರ ಸುಗ್ಗಿ, ಹುಗ್ಗಿ ಸಂಕ್ರಾಂತಿ ಕಾರ್ಯಕ್ರಮ ನಡೆಯಿತು 
ಭಾಲ್ಕಿ ಪಟ್ಟಣದ ನಿರ್ಮಲಾ ಹಲಮಂಡಗೆ ಕ್ರಿಯೇಟಿವ್ ಸ್ಟಡೀಸ್‌ ಶಾಲೆಯಲ್ಲಿ ಶುಕ್ರವಾರ ಸುಗ್ಗಿ, ಹುಗ್ಗಿ ಸಂಕ್ರಾಂತಿ ಕಾರ್ಯಕ್ರಮ ನಡೆಯಿತು    

ಭಾಲ್ಕಿ: ‘ಜನಪದ ಸಂಸ್ಕೃತಿ ನಮ್ಮ ಸಂಸ್ಕೃತಿಯ ಮೂಲ ಬೇರು. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.

ಪಟ್ಟಣದ ನಿರ್ಮಲಾ ಹಲಮಂಡಗೆ ಕ್ರಿಯೇಟಿವ್ ಸ್ಟಡೀಸ್‌ ಶಾಲೆಯಲ್ಲಿ ಶುಕ್ರವಾರ ನಡೆದ ಸುಗ್ಗಿ, ಹುಗ್ಗಿ ಸಂಕ್ರಾಂತಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಪದ ಸಂಸ್ಕೃತಿ ಪ್ರಾರಂಭವಾಗುವುದು ಮನೆಯಿಂದಲೇ. ಮನೆಯಲ್ಲಿಯ ಜನರ ನಡೆ, ನುಡಿಗಳು ಜನಪದ ಸಂಸ್ಕೃತಿಯ ಮೂಲವಾಗಿವೆ. ಜೋಗುಳ ಹಾಡಿನಿಂದ ಪ್ರಾರಂಭವಾದ ಜನಪದ ಸಂಸ್ಕೃತಿ ನಮ್ಮ ಊಟ, ಪಾಠಗಳಲ್ಲಿಯೂ ಮುಂದುವರಿದಿದೆ’ ಎಂದು ಹೇಳಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಪ್ರತಿನಿಧಿ ಮಲ್ಲಮ್ಮಾ ಆರ್. ಪಾಟೀಲ ಮಾತನಾಡಿ, ‘ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬವಾಗಿದೆ. ತೆನೆಗಳು ತುಂಬಿಕೊಂಡಿರುವ ಭೂತಾಯಿಯ ಸೀಮಂತ ಹಬ್ಬವೇ ಸಂಕ್ರಾಂತಿ ಹಬ್ಬವಾಗಿದೆ. ಮಣ್ಣಿನಲ್ಲಿ ನಾವು ಮಣ್ಣಾಗಿ ದುಡಿದಾಗ ಭೂತಾಯಿ ನಮಗೆ ಸಾಕಷ್ಟು ಉತ್ಪನ್ನ ನೀಡುವಳು’ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಮೀನಾಕ್ಷಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅಮರ ಹಲಮಂಡಗೆ ಶಿಕ್ಷಣ ಸಂಸ್ಥೆಯ ಕಾರ್ಯಕಲಾಪಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದರೊಂದಿಗೆ, ಹಳ್ಳಿಯ ಸೊಗಡಿನ ಪ್ರಾತ್ಯಕ್ಷಿಕೆಯನ್ನು ತೋರಿಸುವುದರೊಂದಿಗೆ ವಿನೂತನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಉದ್ಯಮಿ ಸೋಮನಾಥಪ್ಪ ಅಷ್ಟೂರೆ, ಶಿವರಾಜ ಮಲ್ಲೇಶಿ, ತಿಪ್ಪಣ್ಣ ಶಿವಪುರೆ, ಸುಭಾಷ ಹುಲಸೂರೆ, ದಶರಥ ಔರಾದೆ, ಆರುಷ ಚಿಲಶೆಟ್ಟಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.