ADVERTISEMENT

ಮಕ್ಕಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 16:56 IST
Last Updated 14 ಜೂನ್ 2021, 16:56 IST

ಬೀದರ್: ಪ್ರಸಕ್ತ ಸಾಲಿನ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಬಿಸಿಯೂಟದ ಬದಲಾಗಿ ಆಹಾರ ಧಾನ್ಯ ಪೂರೈಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಹೀರಾ ನಸೀಮ್ ತಿಳಿಸಿದ್ದಾರೆ.

ಶಾಲಾ ದಿನಗಳ ಅವಧಿಗೆ ಒಟ್ಟು 3 ಲೀಟರ್ ಖಾದ್ಯ ತೈಲ, 1 ಕೆ.ಜಿ ಉಪ್ಪು ಹಾಗೂ ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆ ನಿಗದಿತ ಪ್ರಮಾಣದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಆಹಾರಧಾನ್ಯ ಹಾಗೂ ಪ್ರಮಾಣದ ಬಗ್ಗೆ ಸಾರ್ವಜನಿಕರ ಗಮನಕ್ಕಾಗಿ ಶಾಲಾ ಸೂಚನಾ ಫಲಕದಲ್ಲಿ ನಮೂದಿಸಿ ಸೂಕ್ತ ಸ್ಥಳದಲ್ಲಿ ಪ್ರದರ್ಶಿಸಬೇಕು. ಸೂಕ್ತ ವಿಧಾನಗಳ ಮೂಲಕ ಸ್ಥಳೀಯವಾಗಿ ಪೋಷಕರಿಗೆ ಆಹಾರಧಾನ್ಯ ವಿತರಣೆ ಬಗ್ಗೆ ಮಾಹಿತಿ ತಲುಪುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ADVERTISEMENT

ಸದ್ಯ 132 ದಿನಗಳಿಗೆ ವಿತರಿಸಲಾಗುವ ಆಹಾರಧಾನ್ಯಗಳ ಪ್ರಮಾಣವು ಅಧಿಕ ಇರುವುದರಿಂದ ಕಡ್ಡಾಯವಾಗಿ ಮಕ್ಕಳ ಪಾಲಕರು ಶಾಲೆಗೆ ಖುದ್ದಾಗಿ ಹಾಜರಾಗಿ ಆಹಾರಧಾನ್ಯಗಳನ್ನು ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಶಾಲೆಯ ಎಲ್ಲ ಪೋಷಕರನ್ನು ಒಂದೇ ಬಾರಿಗೆ ಶಾಲೆಗೆ ಕರೆಸದೇ ಸೀಮಿತ ಸಂಖ್ಯೆಯಲ್ಲಿ ಕರೆಯಿಸಿ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ, ಅಂತರ ಕಾಯ್ದುಕೊಂಡು ಆಹಾರ ಸಾಮಗ್ರಿಗಳನ್ನು ಹಂತ ಹಂತವಾಗಿ ವಿತರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.