ಹುಮನಾಬಾದ್: ‘ಅಮೃತ ಯೋಜನೆಯಿಂದ ಹುಮನಾಬಾದ್, ಚಿಟಗುಪ್ಪ, ಹಳ್ಳಿಖೇಡ್ ಬಿ. ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಪಟ್ಟಣದ ತೇರು ಮೈದಾನದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಹುಮನಾಬಾದ್, ಚಿಟಗುಪ್ಪ ಮತ್ತು ಹಳ್ಳಿಖೇಡ್ ಬಿ. ಪಟ್ಟಣಕ್ಕೆ ಕಾರಂಜಾ ಜಲಾಶಯದಿಂದ ನೀರು ಸರಬರಾಜು ಅಭಿವೃದ್ಧಿ ಯೋಜನೆ ಹಾಗೂ ನಿಂಬೂರ್ ಗ್ರಾಮದಲ್ಲಿ 33/11 ಕೆವಿ ವಿದ್ಯುತ್ ಘಟಕ ನಿರ್ಮಾಣದ ಶಂಕುಸ್ಥಾಪನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘₹161 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಇದಾಗಿದೆ. ಈ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಒಂದೂವರೆ ವರ್ಷದಲ್ಲೇ ಇದರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗಾಗಿ ಸಾಕಷ್ಟು ಹಣ ನಮ್ಮ ಸರ್ಕಾರ ನೀಡುತ್ತಿದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ಪಕ್ಷ ಬೇಧ ಮರೆತು ಎಲ್ಲರಿಗೂ ಸಾಥ್ ನೀಡಲಾಗುತ್ತಿದೆ’ ಎಂದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ‘ಹುಮನಾಬಾದ್ ಪುರಸಭೆ ನಗರಸೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಎಂದು ಒತ್ತಡ ಇದೆ. ಹೀಗಾಗಿ ಹುಮನಾಬಾದ್, ಭಾಲ್ಕಿ ನಗರಸಭೆ ಜೊತೆಗೆ ರಾಜೇಶ್ವ, ಮನ್ನಾಏಖೇಳ್ಳಿ, ಕಮಠಾಣವನ್ನು ಪುರಸಭೆಯನ್ನಾಗಿ ಮಾಡುವುದಕ್ಕೆ ಪ್ರಯತ್ನ ಮಾಡಲಾಗುವುದು’ ಎಂದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ‘ಅಮೃತ ಹಾಗೂ ಜೆಜೆಎಂ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿವೆ. ಹೀಗಾಗಿ ಸಂಬಂಧಪಟ್ಟ ಗುತ್ತಿಗೆದಾರರು ಕಾಮಗಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು. ತಾಲ್ಲೂಕಿನ ನಿಂಬೂರ್ ಗ್ರಾಮದಲ್ಲಿನ ಸುತ್ತಮುತ್ತಲಿನ ರೈತರಿಗೆ ಅನೇಕ ವರ್ಷಗಳಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಗ್ರಾಮದಲ್ಲಿ 33/11 ಕೆವಿ ವಿದ್ಯುತ್ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಈ ಭಾಗದ ಎಲ್ಲ ರೈತರಿಗೆ ಅನುಕೂಲ ಆಗಲಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ, ತಹಶೀಲ್ದಾರ್ ಅಂಜುಂ ತಬಸುಮ್, ತಾ.ಪಂ. ಇಒ ದೀಪಿಕಾ ನಾಯ್ಕರ್, ಡಿವೈಎಸ್ಪಿ ಜೆ.ಎಸ್.ನ್ಯಾಮೇಗೌಡರ್, ಸಿಪಿಐ ಗುರು ಪಾಟೀಲ ಸೇರಿದಂತೆ ಹುಮನಾಬಾದ್, ಚಿಟಗುಪ್ಪ, ಹಳ್ಳಿಖೇಡ್ ಬಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Quote - ಒಂದು ವಾರದಲ್ಲಿ ರೈತರಿಗೆ ಕಬ್ಬಿನ ಹಣ ಹಾಕಬೇಕು. ಇಲ್ಲದಿದ್ದರೆ ಕಾರ್ಖಾನೆಯಲ್ಲಿನ ಸಕ್ಕರೆ ಜಪ್ತಿ ಮಾಡಿಕೊಂಡು ಹರಾಜು ಮಾಡಿ ರೈತರಿಗೆ ಹಣ ನೀಡಲಾಗುವುದು ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
Cut-off box - ಖಂಡ್ರೆ ಹೊಗಳಿದ ಬಿಜೆಪಿ ಶಾಸಕ ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಪಕ್ಷ ಬೇಧ ಮರೆತು ಅಭಿವೃದ್ಧಿ ವಿಷಯದಲ್ಲಿ ಕೇಳಿದ್ದನ್ನು ತಕ್ಷಣ ಮಾಡಿಕೊಡುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು. ಆದರೆ ಪೌರಾಡಳಿತ ಸಚಿವ ರಹೀಂ ಖಾನ್ ಅವರೂ ನಮ್ಮ ಜಿಲ್ಲೆಯವರೇ ಇದ್ದಾರೆ. ಆದರೆ ಎಸ್.ಎಫ್.ಸಿಯ ₹4 ಕೋಟಿ ಅನುದಾನಕ್ಕಾಗಿ ನಾಲ್ಕು ಬಾರಿ ಅವರ ಮನೆಗೆ ಹೋಗುವ ಅನಿವಾರ್ಯತೆ ಬಂದಿತ್ತು ಎಂದರು. ಹುಮನಾಬಾದ್ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಕಾರ್ಖಾನೆಗಳ ಮಾಲಿನ್ಯದಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ ತಕ್ಷಣ ಕಾರ್ಖಾನೆಗಳನ್ನು ಬಂದ್ ಮಾಡಿಸಿರುವುದು ಶ್ಲಾಘನೀಯ’ ಎಂದರು.
Cut-off box - ಅಮೃತ ಯೋಜನೆ ರಾಜಶೇಖರ ಪಾಟೀಲ ಒತ್ತಡದಿಂದ ಬಂದಿದೆ ಹುಮನಾಬಾದ್ ಪಟ್ಟಣಕ್ಕೆ ಮೂರು ದಿನಗಳಿಗೆ ಒಂದು ಬಾರಿ ಕುಡಿಯುವ ನೀರು ಬರುತ್ತಿದ್ದವು. ಹೀಗಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ ಅವರ ಅಧಿಕಾರ ಅವಧಿಯಲ್ಲಿ ಈ ಅಮೃತ 2.0 ಯೋಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅನುಮೋದನೆಗಾಗಿ ನಿರಂತರವಾಗಿ ನಾನೂ ಸೇರಿದಂತೆ ಮಾಜಿ ಸಚಿವ ರಾಜಶೇಖರ ಪಾಟೀಲ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಸರ್ಕಾರಗಳ ಮೇಲೆ ಒತ್ತಡ ಹಾಕಿದ್ದರಿಂದ ಈ ಯೋಜನೆ ಬಂದಿದೆ. ಹೀಗಾಗಿ ಹುಮನಾಬಾದ್ ಚಿಟಗುಪ್ಪ ಹಳ್ಳಿಖೇಡ್ ಬಿ. ಜನರು ಕಾಮಗಾರಿ ಪರಿಶೀಲನೆ ನಡೆಸಬೇಕು. ಗುಣಮಟ್ಟ ಇಲ್ಲದಿದ್ದರೆ ಮೇಲಧಿಕಾರಿಗಳು ಅಥವಾ ನಮ್ಮ ಗಮನಕ್ಕೆ ತರಬೇಕು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ತಿಳಿಸಿದರು.
Cut-off box - ರೈತರಿಂದ ಮನವಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಸಂಘಟನೆಯ ಪ್ರಮುಖರು ಮಾತನಾಡಿ ‘ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ 15 ದಿನಗಳ ಒಳಗಾಗಿ ಹಣ ಹಾಕಬೇಕು ಎಂದು ಆದೇಶವಿದ್ದರೂ ಅವರು ಪಾಲಿಸುತ್ತಿಲ್ಲ. ಬಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ಡಿಸಿಸಿ ಬ್ಯಾಂಕ್‌ನವರು ಮಾರಾಟ ಮಾಡಲು ಹೊರಟಿದ್ದಾರೆ. ಹೀಗಾಗಿ ಈ ಕಾರ್ಖಾನೆಯನ್ನು ಯಾರಿಗಾದರೂ ಲೀಜ್ ಕೊಡಬೇಕು ಎಂದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸತೀಶ್ ನನ್ನೂರೆ ಖಾಸೀಂ ಅಲಿ ಕರಬಸಪ್ಪ ಹುಡಗಿ ಸೇರಿದಂತೆ ಇತರರು ಹಾಜರಿದ್ದರು.
Cut-off box - ಬಿ.ಎಸ್.ಎಸ್.ಕೆ. ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ‘ಫೆ.15 ಅಥವಾ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದರ್‌ಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಬಿ.ಎಸ್.ಎಸ್.ಕೆ ಕಾರ್ಖಾನೆ ಬಗ್ಗೆ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಈಗಾಗಲೇ ಬಿ.ಎಸ್.ಎಸ್.ಕೆ ಬಹಳಷ್ಟು ಹಾಳು ಮಾಡಿದ್ದಾರೆ. ಇದನ್ನು ಯಾವ ರೀತಿ ಆರಂಭ ಮಾಡಬೇಕು. ಡಿಸಿಸಿ ಬ್ಯಾಂಕ್ ಮತ್ತು ಬಿ.ಎಸ್.ಎಸ್.ಕೆ. ಕಾರ್ಖಾನೆ ಈ ಎರಡೂ ಉಳಿದಾಗ ಮಾತ್ರ ಜಿಲ್ಲೆಯ ರೈತರಿಗೆ ಅನುಕೂಲ ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.