ADVERTISEMENT

ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ

ಭೀಮಣ್ಣ ಖಂಡ್ರೆ ಅವರಿಗೆ ಕುಟುಂಬ ಸದಸ್ಯರಿಂದ ಪೂಜೆ, ಆರತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:03 IST
Last Updated 17 ಜನವರಿ 2026, 6:03 IST
   

ಭಾಲ್ಕಿ (ಬೀದರ್‌ ಜಿಲ್ಲೆ): ಶುಕ್ರವಾರ ರಾತ್ರಿ ನಿಧನರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿಕೊಂಡಿದೆ.

ರಾತ್ರಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಖಂಡ್ರೆಯವರ ನಿಧನದ ಸುದ್ದಿ ಹರಿದಾಡುತ್ತಿದ್ದಂತೆ ಪಟ್ಟಣ ಸ್ತಬ್ಥಗೊಂಡಿತ್ತು. ಮುಂಚಿತವಾಗಿಯೇ ನಿಗದಿಯಾಗಿದ್ದ ಖಾಸಗಿ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು. ಶನಿವಾರ ಬೆಳಕು ಹರಿದ ನಂತರವೂ ಮೌನ ಮನೆ ಮಾಡಿತ್ತು.

ಜನ ಖಂಡ್ರೆ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಮಳಿಗೆಗಳನ್ನು ಮುಚ್ಚಿ ಗೌರವ ಸೂಚಿಸಿದರು.

ADVERTISEMENT

ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಆರತಿ ಬೆಳಗಿದರು.

ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು.

ಪುತ್ರರಾದ ಈಶ್ವರ ಬಿ. ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.