ADVERTISEMENT

ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ‌ ನಿಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 17:57 IST
Last Updated 16 ಜನವರಿ 2026, 17:57 IST
<div class="paragraphs"><p>ಭೀಮಣ್ಣ ಖಂಡ್ರೆ</p></div>

ಭೀಮಣ್ಣ ಖಂಡ್ರೆ

   

- ಪ್ರಜಾವಾಣಿ ಚಿತ್ರ

ಬೀದರ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು.

ADVERTISEMENT

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೀವರಕ್ಷಕಗಳ ಮೂಲಕ ಒಂದು ವಾರ ಬೀದರ್ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಸತತವಾಗಿ ಆರೋಗ್ಯ ಕ್ಷೀಣಿಸಿದ ಕಾರಣ ಸೋಮವಾರ (ಜ.12) ಅವರನ್ನು ಮನೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಮನೆಯಲ್ಲಿಯೇ ವೈದ್ಯರ ತಂಡ ಅವರನ್ನು ಉಪಚರಿಸುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಶುಕ್ರವಾರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ರಾತ್ರಿ ನಿಧನರಾದರು. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಮಗ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಮೊಮ್ಮಗ ಸಾಗರ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಎಲ್ಲಾ ರೀತಿಯ ಕಾರ್ಯಕ್ರಮಗಳಿಂದ ದೂರ ಉಳಿದು ಮನೆಯಲ್ಲಿಯೇ ಉಳಿದುಕೊಂಡಿದ್ದರು. 

ಖಂಡ್ರೆಯವರ ಆರೋಗ್ಯದಲ್ಲಿ ಏರುಪೇರಾದ ವಿಷಯ ತಿಳಿದು ವಿವಿಧ ಮಠಾಧೀಶರು, ಸಚಿವರು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಕಳೆದ ಹಲವು ದಿನಗಳಿಂದ ಅವರ ಮನೆಗೆ ಭೇಟಿ ನೀಡುತ್ತಿದ್ದರು.

ಭೀಮಣ್ಣ ಖಂಡ್ರೆಯವರಿಗೆ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಸೇರಿದಂತೆ ಇಬ್ಬರು ಪುತ್ರರು, ಐದು ಜನ ಪುತ್ರಿಯರು ಇದ್ದಾರೆ. ಪತ್ನಿ ಲಕ್ಷ್ಮೀಬಾಯಿ ಖಂಡ್ರೆ, ಗಂಡು ಮಕ್ಕಳ ಪೈಕಿ ಹಿರಿಯ ಮಗ, ಮಾಜಿ ಶಾಸಕ ವಿಜಯಕುಮಾರ್‌ ಖಂಡ್ರೆ ಆವರು ಅನಾರೋಗ್ಯದಿಂದ ಈ ಹಿಂದೆಯೇ ಮೃತಪಟ್ಟಿದ್ದಾರೆ.

ನಾಲ್ಕು ಸಲ ಶಾಸಕರಾಗಿ, ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿದ್ದ ಭೀಮಣ್ಣ ಖಂಡ್ರೆ ಅವರು ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿದ್ದರು.

ಶನಿವಾರ ಅಂತ್ಯಕ್ರಿಯೆ

ಭೀಮಣ್ಣ ಖಂಡ್ರೆಯವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಶನಿವಾರ (ಜ.17) ನೆರವೇರಲಿದೆ ಎಂದು ಅವರ ಮಗ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ ಭಾಲ್ಕಿ ಹೊರವಲಯದ ಚಿಕಲಚಂದಾ ಗ್ರಾಮ ಸಮೀಪದ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಪತ್ನಿ ದಿವಂಗತ ಲಕ್ಷ್ಮೀಬಾಯಿ ಅವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಶುಕ್ರವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.