ADVERTISEMENT

’ಶೈಕ್ಷಣಿಕ ತರಬೇತಿಗೆ ಭವನ ಉಚಿತ’

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಗಂದಗೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 16:10 IST
Last Updated 13 ಫೆಬ್ರುವರಿ 2019, 16:10 IST
ಬೀದರ್‌ನ ಸರಸ್ವತಿ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ, ಸಂಕಲ್ಪ ದಿನಾಚರಣೆ ಹಾಗೂ ಪರೀಕ್ಷಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಎಸ್. ಉದ್ಘಾಟಿಸಿದರು
ಬೀದರ್‌ನ ಸರಸ್ವತಿ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ, ಸಂಕಲ್ಪ ದಿನಾಚರಣೆ ಹಾಗೂ ಪರೀಕ್ಷಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಎಸ್. ಉದ್ಘಾಟಿಸಿದರು   

ಬೀದರ್: ‘ಜಿಲ್ಲೆಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ ನಡೆಸಲು ಪ್ರತಾಪನಗರದ ಸರ್ಕಾರಿ ನೌಕರರ ಸಮುದಾಯ ಭವನವನ್ನು ಉಚಿತವಾಗಿ ಕೊಡಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಘೋಷಿಸಿದರು.

ನಗರದ ಸರಸ್ವತಿ ಶಾಲೆಯ ಗಿರಿಜಾ ಭವನದಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ, ಸಂಕಲ್ಪ ದಿನಾಚರಣೆ ಮತ್ತು ಪರೀಕ್ಷಾ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರು, ಉಪನ್ಯಾಸಕರು ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ADVERTISEMENT

‘ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಜಿಲ್ಲೆಯ ಎಲ್ಲ ವಿಷಯಗಳ ನುರಿತ ಉಪನ್ಯಾಸಕರು ಸೇರಿ ಪರೀಕ್ಷಾ ಕೈಪಿಡಿ ಸಿದ್ಧಪಡಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಸಂಘದ ಪಾಕೇಟ್‌ ಡೈರಿ ಬಿಡುಗಡೆ ಮಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ‘ಜಿಲ್ಲೆಯ ಉಪನ್ಯಾಸಕರ ಪರೀಕ್ಷಾ ಕೈಪಿಡಿ ಓದಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಮಾಧ್ಯಮಿಕ ಶಿಕ್ಷಕರ ಸಂಘದ ಪಾಕೇಟ್‌ ಡೈರಿ ಬಿಡುಗಡೆಗೊಳಿಸಿದ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮಾತನಾಡಿ,‘ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ವೃದ್ಧಿಸಲು ಈಗಾಗಲೇ ಎಲ್ಲ ಶಾಲೆಗಳಲ್ಲಿ ಘಟಕ ಪರೀಕ್ಷೆ, ತ್ರೈಮಾಸಿಕ ಪರೀಕ್ಷೆ, ಗುಂಪು ಚಟುವಟಿಕೆ, ಪರಿಹಾರ ಬೋಧಕ ತರಗತಿಗಳನ್ನು ಆಯೋಜಿಸಲಾಗಿದೆ. ಆ ಮೂಲಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಂತೆ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಲಾಗಿದೆ’ ಎಂದು ಹೇಳಿದರು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಅಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ ಮಾತನಾಡಿ,‘ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಹೀಗಾಗಿ ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು’ ಎಂದರು.

ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವರಾಜ ಪಾಟೀಲ, ಅಧ್ಯಕ್ಷ ಹಣಮಂತರಾವ್ ಮೈಲಾರೆ ಹಾಗೂ ಕಾರ್ಯದರ್ಶಿ ವಿಠ್ಠಲದಾಸ ಪ್ಯಾಗೆ ಮಾತನಾಡಿದರು.

ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರ ಸಂಘದ ಕಾರ್ಯದರ್ಶಿ ಬಸವರಾಜ ಎಣಕೆಮುರೆ, ಸಂಘದ ಪದಾಧಿಕಾರಿಗಳಾದ ನಾಗನಾಥ ಬಿರಾದಾರ, ರಮೇಶ ಪಾಟೀಲ, ಸೂರ್ಯಕಾಂತ ಐನಾಪೂರ, ಪ್ರಕಾಶ ಬಸಲಿಂಗ, ಓಂಪ್ರಕಾಶ ಧಡ್ಡೆ, ಎಲ್.ಟಿ. ಬಜರಂಗ, ಉಮಾಕಾಂತ ಮೀಸೆ, ಮಾಧ್ಯಮಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಪ್ರಕಾಶ ಡೋಂಗ್ರೆ, ಕಾರ್ಯದರ್ಶಿ ಪ್ರಕಾಶ ಲಕ್ಕಶೆಟ್ಟಿ, ಶಾಲಿವಾನ ಗಂದಗೆ, ಮಹಿಳಾ ಪ್ರತಿನಿಧಿ ಕಲ್ಪನಾ ಚಿಕಮುರ್ಗೆ, ವರಲಕ್ಷ್ಮಿ ಜಾಧವ್, ಪರಮೇಶ ಬಿರಾದಾರ, ಪ್ರೀತಂಸಿಂಗ್ ಯಾದವ್, ಸಂತೋಷ ರಾಯಕೋಟೆ ಇದ್ದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಕುಮಾರ ಬಿರಾದಾರ ಸ್ವಾಗತಿಸಿದರು. ಶಿವಕುಮಾರ ಸಾಲಿ ನಿರೂಪಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ರಾಜಶೇಖರ ಮಂಗಲಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.