ADVERTISEMENT

6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ: ಪರೀಕ್ಷೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:25 IST
Last Updated 13 ಫೆಬ್ರುವರಿ 2026, 7:25 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಭಾಲ್ಕಿ: ‘ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಉತ್ತೇಜನ ನೀಡುವುದರ ಜತೆಗೆ 6 ರಿಂದ 10ನೇ ತರಗತಿವರೆಗೆ ಬಡ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಯೋಜನೆ ರೂಪಿಸಲಾಗಿದೆ’ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣದ ಭರಾಟೆಯಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಕುಸಿಯುತ್ತಿದೆ ಎನ್ನುವ ಆತಂಕ ಎಲ್ಲರಲ್ಲಿ ಕಾಡುತ್ತಿದೆ. ಇಂತಹ ಸಮಯದಲ್ಲಿ ಕನ್ನಡ ಮಾಧ್ಯಮ ಮೌಲ್ಯ ಎತ್ತಿ ಹಿಡಿಯಲು ಕಳೆದ ಎರಡು ವರ್ಷಗಳಿಂದ ಪ್ರತಿ ವರ್ಷ 30 ಮಕ್ಕಳಿಗೆ ಉಚಿತ ಶಿಕ್ಷಣ, ಐಐಟಿ, ನೀಟ್ ನಂತಹ ತರಬೇತಿ ಜತೆಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದರು.

2026ನೇ ಸಾಲಿನಲ್ಲಿ 30 ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಅರ್ಜಿ ಆಹ್ವಾನಿಸಿ ಪರೀಕ್ಷೆ ಏರ್ಪಡಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಕ್ರಮವಾಗಿ ಮೊದಲ 30 ರ‍್ಯಾಂಕ್‌ ಪಡೆಯುವ ವಿದ್ಯಾರ್ಥಿಗಳು 6 ರಿಂದ 10ನೇ ತರಗತಿ ವರೆಗೆ ಉಚಿತ ಸೌಲಭ್ಯ ಪಡೆದು ಕೊಳ್ಳಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ ಚನ್ನಬಸವೇಶ್ವರ ಗುರುಕುಲದಲ್ಲಿ ಫೆ.15 ಮತ್ತು 22 ರಂದು ಭಾನುವಾರ ಪರೀಕ್ಷೆ ಏರ್ಪಡಿಸಲಾಗಿದೆ. ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಈ ಸೌಲಭ್ಯ ಕೊಡಿಸಲು ಮುಂದಾಗಬೇಕು’ ಎಂದು ತಿಳಿಸಿದರು.

5 ಸಾವಿರ ಮಕ್ಕಳು ನೋಂದಣಿ: ಈಗಾಗಲೇ ಪರೀಕ್ಷೆ ಬರೆಯಲು 5 ಸಾವಿರ ಮಕ್ಕಳು ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದರು.

100 ಅಂಕದ ಬಹು ಆಯ್ಕೆ ಪ್ರಶ್ನೆಗಳು ಇರಲಿದ್ದು, ಕನ್ನಡ 20, ಇಂಗ್ಲಿಷ್ 20, ಗಣಿತ 30, ಪರಿಸರ ಅಧ್ಯಯನ 20 ಮತ್ತು ಮಾನಸಿಕ ಸಾಮರ್ಥ್ಯ ವಿಷಯದ 10 ಅಂಕಗಳನ್ನು ಒಳಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7353304506/73533045090 ಕ್ಕೆ ಕರೆ ಮಾಡಬೇಕು ಎಂದು ಹೇಳಿದರು.

ಮಹಾಲಿಂಗ ಸ್ವಾಮೀಜಿ, ಉದ್ಯಮಿ ಸೋಮನಾಥಪ್ಪ ಅಷ್ಟೂರೆ, ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.