ಬಸವಕಲ್ಯಾಣ: ‘ನಗರದಲ್ಲಿನ ಅನುಭವ ಮಂಟಪ ನಿರ್ಮಾಣಕ್ಕೆ ಹಣದ ಕೊರತೆ ಆಗುವುದಿಲ್ಲ. ಹಂತಹಂತವಾಗಿ ಅನುದಾನ ನೀಡಲಾಗುತ್ತದೆ’ ಎಂದು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಭರವಸೆ ನೀಡಿದ್ದಾರೆ.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಮಂಟಪದ ಕಾಮಗಾರಿಗೆ ಮೊದಲು ₹612 ಕೋಟಿ ಅನುದಾನವಿತ್ತು. ರಾಜ್ಯ ಸರ್ಕಾರ ಈಚೆಗೆ ಮತ್ತೆ ₹132 ಕೋಟಿ ಹೆಚ್ಚಿಸಿ ₹742 ಕೋಟಿಯ ಪರಿಷ್ಕೃತ ಪಟ್ಟಿಗೆ ಅನುಮೋದನೆ ನೀಡಿದೆ. ಸಂಬಂಧಿತರು ಗುಣಮಟ್ಟದ ಕಾರ್ಯ ಕೈಗೊಳ್ಳಬೇಕು. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು’ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ, ಉಪ ವಿಭಾಗಾಧಿಕಾರಿ ಮುಕುಲ್ ಜೈನ್, ತಹಶೀಲ್ದಾರ್ ದತ್ತಾತ್ರೇಯ ಗಾದಾ ಮತ್ತಿತರರು ಉಪಸ್ಥಿತರಿದ್ದರು. ಸಭೆ ಬಳಿಕ ಮುಖ್ಯ ಕಾರ್ಯದರ್ಶಿಯವರು ಅನುಭವ ಮಂಟಪದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು.
ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಅವರು ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು. ಅಭಿಲೇಖಾಲಯಕ್ಕೆ ಭೇಟಿ ನೀಡಿ ಕಂಪ್ಯೂಟರೀಕರಣ ವ್ಯವಸ್ಥೆ ಪರಿಶೀಲಿಸಿದರು.
ತಾಲ್ಲೂಕಿನ ಮಂಠಾಳದ ನಾಡ ಕಚೇರಿಗೆ ರಾಜೇಂದ್ರಕುಮಾರ ಕಠಾರಿಯಾ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದ ಭೂಮಿ ಅತಿಕ್ರಮಣ ಆಗುವುದನ್ನು ತಡೆಯಬೇಕು. ಗ್ರಾಮಸ್ಥರಿಗೆ ನಿಗದಿತ ಸಮಯದಲ್ಲಿ ಸೌಲಭ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.