ADVERTISEMENT

ಗಾಂಧಿ ತತ್ವಗಳನ್ನು ಕೊಂದವರೇ ಅವರ ವಾರಸುದಾರರು

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 10:45 IST
Last Updated 17 ನವೆಂಬರ್ 2019, 10:45 IST
ಸಿ.ಟಿ.ರವಿ
ಸಿ.ಟಿ.ರವಿ   

ಬೀದರ್‌: ‘ಗೋಡ್ಸೆ, ಮಹಾತ್ಮ ಗಾಂಧಿ ದೇಹವನ್ನು ಕೊಂದಿರಬಹುದು. ಆದರೆ, ಗಾಂಧಿ ವಾರಸುದಾರರು ಅವರ ತತ್ವಗಳನ್ನು ಕೊಂದಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಟೀಕಿಸಿದರು.

‘ಗಾಂಧಿ ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸುವಂತೆ ಹೇಳಿದ್ದರು. ಆದರೆ, ಅದನ್ನು ವಂಶ ಪಾರಂಪರಿಕ ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು’ ಎಂದು ಶನಿವಾರ ಇಲ್ಲಿ ಗಾಂಧಿ ಸಂಕಲ್ಪ ಯಾತ್ರೆ ಹಾಗೂ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಗಾಂಧ ಅವರು ಎಂದೂ ವಂಶ ಪಾರಂಪರಿಕ ರಾಜಕೀಯವನ್ನು ಬೆಂಬಲಿಸಿರಲಿಲ್ಲ. ಪ್ರಾಮಾಣಿಕ, ನೈತಿಕ ಹಾಗೂ ಸರಳ ಜೀವನವನ್ನು ಬಯಸಿದ್ದರು. ಆದರೆ, ಅವರ ಸರಳತೆಯನ್ನು ಬದಲಿಸಿ ಯಾರು ವೈಭವೀಕರಿಸಿದರೋ ಅವರೇ ಅವರ ತತ್ವಗಳನ್ನು ಕೊಂದಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮಹಾತ್ಮ ಗಾಂಧೀಜಿಯ ಟೋಪಿ ಅವರ ಸರಳ ಬದುಕಿನ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಬೇರೆಯವರಿಗೆ ಟೋಪಿ ಹಾಕುವುದಲ್ಲ. ಟೋಪಿ ಹಾಕುವ ಕೆಲಸ ಅವರ ರಾಜಕೀಯ ವಾರಸುದಾರರದ್ದಾಗಿದೆ’ ಎಂದು ಕುಟುಕಿದರು.

‘ಗಾಂಧೀಜಿ ಹೆಸರು ಹೇಳಿಕೊಂಡು ರಾಜಕೀಯ ಮಾಡಬಾರದು. ಮತ್ತೆ ಅವರನ್ನು ಜೀವಂತವಾಗಿ ತರುವ ಸಂಜೀವಿನಿ ನಮ್ಮಲ್ಲಿ ಇಲ್ಲ. ಹೀಗಾಗಿ ಅವರ ತತ್ವಗಳನ್ನು ಅನುಸರಿಸಬೇಕು. ಆಗ ಮಾತ್ರ ಮಹಾತ್ಮ ಗಾಂಧೀಜಿಯ 150ನೇ ವರ್ಷಾಚರಣೆಯ ಸಂಕಲ್ಪ ಯಾತ್ರೆ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್‌ ಅಯೋಧ್ಯೆಯ ತೀರ್ಪು ನೀಡಿದ ನಂತರ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿ ‘ಮೇರಾ ಮಸ್ಜೀದ್‌ ಮುಝೆ ದೇದೋ’ ಎಂದಿದ್ದಾರೆ. ಇವರು ಬಾಬರ್‌ನೊಂದಿಗೆ ಗುರುತಿಸಿಕೊಳ್ಳುವುದಾದರೆ ಬಾಬರ್ ಇಲ್ಲಿಯವನಲ್ಲ. ಪರ್ಷಿಯಾದಿಂದ ಬಂದವನು. ಅಸಾದುದ್ದೀನ್ ಅಲ್ಲಿಗೇ ಹೋಗಲಿ, ಮಸೀದಿಯನ್ನೂ ಹುಡುಕಲಿ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.