ADVERTISEMENT

ಭಾಲ್ಕಿಯಲ್ಲಿ ಗಡಿ ಕನ್ನಡೋತ್ಸವ ನಾಳೆ

ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಕನ್ನಡ ಬಾವುಟ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 13:06 IST
Last Updated 28 ನವೆಂಬರ್ 2022, 13:06 IST
ಹವಾ ಮಲ್ಲಿನಾಥ ಮಹಾರಾಜ
ಹವಾ ಮಲ್ಲಿನಾಥ ಮಹಾರಾಜ   

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾಲ್ಕಿ ಪಟ್ಟಣದಲ್ಲಿ ಡಿ. 30 ರಂದು ಗಡಿ ಕನ್ನಡೋತ್ಸವ ಹಾಗೂ ಸಾವಿರ ಮೀಟರ್ ಉದ್ದದ ಕನ್ನಡ ಬಾವುಟದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30ಕ್ಕೆ ಪಟ್ಟಣದ ಶಿವಾಜಿ ವೃತ್ತದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಟೌನ್ ಹಾಲ್ ವರೆಗೆ ಕನ್ನಡ ಬಾವುಟ ಹಾಗೂ ಅಲಂಕೃತ ತೆರೆದ ವಾಹನದಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಮಧ್ಯಾಹ್ನ 2ಕ್ಕೆ ತಹಶೀಲ್ದಾರ್ ಕಚೇರಿ ಸಮೀಪದ ಪುರಭವನದಲ್ಲಿ ಗಡಿ ಕನ್ನಡೋತ್ಸವ ಜರುಗಲಿದೆ. ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಸಾನಿಧ್ಯ ವಹಿಸುವರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸುವರು. ಹುಲಸೂರಿನ ಶಿವಾನಂದ ಸ್ವಾಮೀಜಿ, ಖಾನಾಪುರ ಆನಂದ ಆಶ್ರಮದ ಜಗದೀಶ್ವರಿ ಮಾತೆ, ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಮೈಲಾರ ಮಲ್ಲಣ್ಣ ದೇವಸ್ಥಾನದ ಅರ್ಚಕ ಬಸಪ್ಪ ಎಂ. ಹಿರಿವಗ್ಗೆ, ಗೋರಚಿಂಚೋಳಿಯ ಸಿದ್ಧರಾಮೇಶ್ವರ ಪಟ್ಟದ್ದೇವರು, ಖಟಕಚಿಂಚೋಳಿಯ ಬಸವಲಿಂಗ ಸ್ವಾಮೀಜಿ, ಬೀದರ್‍ನ ಗುರುದ್ವಾರದ ಗ್ಯಾನಿ ದರ್ಬಾರಾಸಿಂಗ್, ಆಣದೂರಿನ ಭಂತೆ ಜ್ಞಾನಸಾಗರ ಥೆರೋ, ಹಲಬರ್ಗಾದ ಅನುಗ್ರಹ ಶಾಲೆಯ ಪ್ರಸನ್ನಕುಮಾರ, ಬೀದರ್‍ನ ಸೂಫಿ ಸೈಯದ್ ಸಾಜಿದ್ ಅಲಿ ಷಾ ಅಲ್ ಹುಸೈನಿ ಸಮ್ಮುಖ ವಹಿಸುವರು.

ADVERTISEMENT

ಹಿರಿಯ ಪತ್ರಕರ್ತ ಸದಾನಂದ ಜೋಶಿ ‘ಗಡಿಯಲ್ಲಿ ಕನ್ನಡದ ಸ್ಥಿತಿಗತಿ’ ಕುರಿತು ವಿಶೇಷ ಉಪನ್ಯಾಸ ನೀಡುವರು. ಜೈ ಭಾರತ ಮಾತಾ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಅಧ್ಯಕ್ಷತೆ ವಹಿಸುವರು.
ಮಾಜಿ ಸೈನಿಕರು, ರೈತರು, ಕನ್ನಡ ಪರ ಹೋರಾಟಗಾರರು ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ತಣಿಸಲಿವೆ.

ಕನ್ನಡ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.