ADVERTISEMENT

ಮಳೆಯಲ್ಲೂ ಕುಂದದ ಗಣೇಶ ಉತ್ಸವದ ಸಿದ್ಧತೆ: ‘ಬೀದರ್‌ ಕಾ ರಾಜಾ’ ಪ್ರಮುಖ ಆಕರ್ಷಣೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಆಗಸ್ಟ್ 2025, 6:28 IST
Last Updated 18 ಆಗಸ್ಟ್ 2025, 6:28 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೀದರ್‌: ಗಣೇಶ ಚತುರ್ಥಿಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದ್ದು, ಸತತ ಸುರಿಯುತ್ತಿರುವ ಮಳೆಯಲ್ಲೇ ಚುರುಕಿನ ಸಿದ್ಧತೆ ನಡೆದಿದೆ.

ನಗರದಲ್ಲಿ ಹಲವು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಆದರೆ, ಇದು ಗಣೇಶ ಮಹಾಮಂಡಳಿಯವರ ಉತ್ಸಾಹ ಕುಂದಿಸಿಲ್ಲ. ಮಳೆಯಲ್ಲೇ ಅದ್ದೂರಿ ಗಣೇಶ ಉತ್ಸವಕ್ಕೆ ತಯಾರಿ ನಡೆಸಿದ್ದಾರೆ.

ಈಗಾಗಲೇ ಗಣೇಶ ಮಹಾಮಂಡಳಿ ರಚಿಸಿ, ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಆಯಾ ಗಣೇಶ ಮಂಡಳಿಯವರು ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಈಗಾಗಲೇ ಪೆಂಡಾಲ್‌ ನಿರ್ಮಿಸುವ ಕಾರ್ಯ ಭರದಿಂದ ನಡೆದಿದೆ.

ADVERTISEMENT


ಬೀದರ್‌ ಕಾ ರಾಜಾ ಪ್ರಮುಖ ಆಕರ್ಷಣೆ:

ಬೀದರ್‌ ನಗರವೊಂದರಲ್ಲೇ 250ಕ್ಕೂ ಹೆಚ್ಚು ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ, ಪ್ರತಿವರ್ಷ ಭಿನ್ನ ಬಗೆಯ ಮಂಟಪವನ್ನು ವಿನ್ಯಾಸಗೊಳಿಸಿ, ಗಣಪನನ್ನು ಪ್ರತಿಷ್ಠಾಪಿಸಿ ಎಲ್ಲರ ಚಿತ್ತ ಸೆಳೆಯುತ್ತ ಬಂದಿರುವುದು ‘ಬೀದರ್‌ ಕಾ ರಾಜಾ’ ಗಣೇಶ ಮಹಾಮಂಡಳಿ.

ಕಳೆದ 12 ವರ್ಷಗಳಿಂದ ಗಣಪನ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿರುವ ಈ ಮಹಾಮಂಡಳಿ ಈ ಸಲ ಪುರಿ ಜಗನ್ನಾಥ ಮಂದಿರದ ಪ್ರತಿಕೃತಿ ನಿರ್ಮಿಸುತ್ತಿದೆ. ಕಳೆದ ಒಂದು ತಿಂಗಳಿಂದ ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕಾಗಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಿಂದ 30 ನುರಿತ ಕಲಾವಿದರನ್ನು ಕರೆಸಿದೆ. ಇವರು ಮಳೆ ಲೆಕ್ಕಿಸದೇ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು, ಜಗನ್ನಾಥ ಮಂದಿರಕ್ಕೆ ಅಂತಿಮ ರೂಪ ಕೊಡುತ್ತಿದ್ದಾರೆ. ಈ ಮಹಾಮಂಡಳಿಯವರು ಪ್ರತಿವರ್ಷ ದೇಶದ ಪ್ರಮುಖ ಧಾರ್ಮಿಕ ಕೇಂದ್ರವೊಂದರ ಮಾದರಿ ಮಾಡಿ, ಅದರೊಳಗೆ ವಿನಾಯಕನ ಪ್ರತಿಷ್ಠಾಪಿಸುತ್ತಾರೆ.

‘ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳ ಪರಿಚಯ ಮಾಡಿಕೊಡಬೇಕೆಂಬ ಉದ್ದೇಶದಿಂದ ಪ್ರತಿವರ್ಷ ಒಂದು ದೇವಸ್ಥಾನ ಆಯ್ಕೆ ಮಾಡಿ, ಅದರ ಮಾದರಿ ಮಾಡಿಸುತ್ತೇವೆ. ಈ ಹಿಂದೆ ಕೇದಾರನಾಥ ದೇವಸ್ಥಾನ, ರಾಮಮಂದಿರ, ತಿರುಪತಿ ವೆಂಕಟೇಶ್ವರ ದೇವಾಲಯ ಸೇರಿದಂತೆ ಇತರೆ ಮಂದಿರಗಳನ್ನು ಪರಿಚಯಿಸಿದ್ದೆವು. ಈ ಸಲ ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ಮಂದಿರ ಮಾಡಿಸುತ್ತಿದ್ದೇವೆ. 30ರಿಂದ 35 ಅಡಿ ಎತ್ತರದ ಮಂದಿರದೊಳಗೆ ಹೈದರಾಬಾದ್‌ನಿಂದ 18 ಅಡಿ ಎತ್ತರದ ಗಣಪನ ಮೂರ್ತಿ ತಂದು, ಅದರೊಳಗೆ ಕೂರಿಸುತ್ತೇವೆ. ಕೃಷ್ಣನ ಅವತಾರದಲ್ಲಿ ವಿಘ್ನ ನಿವಾರಕ ಇರುವುದು ವಿಶೇಷ’ ಎಂದು ಗಣೇಶ ಮಂಡಳಿಯ ಪ್ರಮುಖರಲ್ಲಿ ಒಬ್ಬರಾದ ನಾಗರಾಜ್‌ ಜಾಬಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾವೆಲ್ಲರೂ ಸ್ನೇಹಿತರು ಒಟ್ಟುಗೂಡಿ, ನಮ್ಮ ಕೈಲಾದಷ್ಟು ಹಣ ಹಾಕುತ್ತೇವೆ. ಕೆಲವು ದಾನಿಗಳು ಸಹ ನೀಡುತ್ತಾರೆ. ಯಾರಿಗೂ ಬಲವಂತವಾಗಿ ಕೇಳುವುದಿಲ್ಲ. ಇದು ದೇವರ ಸೇವೆ. ಎಲ್ಲರೂ ಅವರ ಸ್ವಯಂ ಇಚ್ಛೆಯಿಂದ ಮುಂದೆ ಬರಬೇಕು. ಐದು ದಿನಗಳ ಕಾಲ ಪ್ರಸಾದ, ಭಕ್ತಿ ಸಂಗೀತ ಕಾರ್ಯಕ್ರಮ ಇರುತ್ತದೆ. ಸಿದ್ಧತೆ ನಡೆದಿದ್ದು, ಚತುರ್ಥಿಯ ಮುನ್ನ ದಿನ ಎಲ್ಲ ಕೆಲಸ ಮುಗಿಯಲಿದೆ. ಎಲ್ಲರೂ ಬಂದು ಬೆನಕನ ದರ್ಶನ ಪಡೆದುಕೊಂಡು ಹೋಗಬೇಕು’ ಎಂದು ಮನವಿ ಮಾಡಿದ್ದಾರೆ.

‘ಬೀದರ್‌ ಕಾ ರಾಜಾ’ ಗಣೇಶ ಮಂಡಳಿಯಿಂದ ನಗರದ ಸಾಯಿ ಶಾಲೆ ಮೈದಾನದಲ್ಲಿ ನಿರ್ಮಿಸುತ್ತಿರುವ ಪುರಿ ಜಗನ್ನಾಥ ಮಂದಿರ

‘270ಕ್ಕೂ ಹೆಚ್ಚು ಮೂರ್ತಿ ಪ್ರತಿಷ್ಠಾಪನೆ’:

ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಗಣಪನ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ‘ಹೋದ ವರ್ಷ 260 ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಬೀದರ್‌ ನಗರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಸಲ 270ಕ್ಕೂ ಅಧಿಕ ಗಣೇಶ ಮಹಾಮಂಡಳಿಗಳಿಂದ ಗಣೇಶ ಉತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ಕಳೆದ ವರ್ಷಕ್ಕಿಂತಲೂ ಈ ಸಲ ಅದ್ದೂರಿಯಾಗಿ ಉತ್ಸವ ಆಚರಿಸಲಾಗುವುದು’ ಎಂದು ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.