ADVERTISEMENT

ಬಸವಕಲ್ಯಾಣ: ಅಮೃತ ಮಹೋತ್ಸವದ ಗಣೇಶ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 14:10 IST
Last Updated 6 ಸೆಪ್ಟೆಂಬರ್ 2024, 14:10 IST
ಬಸವಕಲ್ಯಾಣದಲ್ಲಿ ಶುಕ್ರವಾರ ಭವಾನಿ ಮಂದಿರ ಹತ್ತಿರದ ಸರ್ದಾರ ಪಟೇಲ್ ಚೌಕ್ ನಲ್ಲಿ ಪ್ರತಿಷ್ಠಾಪಿಸಲಿರುವ ಗಣೇಶನನ್ನು ವಾಹನದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು
ಬಸವಕಲ್ಯಾಣದಲ್ಲಿ ಶುಕ್ರವಾರ ಭವಾನಿ ಮಂದಿರ ಹತ್ತಿರದ ಸರ್ದಾರ ಪಟೇಲ್ ಚೌಕ್ ನಲ್ಲಿ ಪ್ರತಿಷ್ಠಾಪಿಸಲಿರುವ ಗಣೇಶನನ್ನು ವಾಹನದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು   

ಬಸವಕಲ್ಯಾಣ: ನಗರದ ಭವಾನಿ ಮಂದಿರ ಹತ್ತಿರದ ಸರ್ದಾರ್ ಪಟೇಲ್ ಚೌಕ್‌ನಲ್ಲಿ ಗಣೇಶ ಪ್ರತಿಷ್ಠಾಪನೆಗೆ 75 ವರ್ಷ ಪೊರೈಸಿರುವ ಕಾರಣ‌ ಶುಕ್ರವಾರ ಭವ್ಯ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ಅಲ್ಲಿಗೆ ಕೊಂಡೊಯ್ಯಲಾಯಿತು.

ಸಿಂಗರಿಸಿದ ತೆರೆದ ವಾಹನದಲ್ಲಿ ಎತ್ತರದ ಗಣೇಶ ಮೂರ್ತಿ ಇಡಲಾಗಿತ್ತು. ಎದುರಲ್ಲಿ ಬ್ಯಾಂಡ್ ಬಾಜಾ ತಂಡದವರು ಹಾಗೂ ಇತರೆ ವಾದ್ಯ ಮೇಳದವರು ಇದ್ದರು. ಯುವಕರು ಲೇಜಿಮ್ ಪ್ರದರ್ಶಿಸಿದರು.‌ ಮದ್ದು ಸುಡುತ್ತ, ಜೈಕಾರ ಕೂಗುತ್ತ ಮೆರವಣಿಗೆ ನಡೆಯಿತು.

ಹರಳಯ್ಯ ವೃತ್ತದಲ್ಲಿನ ಹಿಂಗುಲಾಂಬಿಕಾ ದೇವಿ ಕಟ್ಟೆಯಿಂದ ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಮಹಾತ್ಮ ಗಾಂಧಿ ವೃತ್ತದ ಮೂಲಕ ಪಟೇಲ್ ಚೌಕ್‌ವರೆಗೆ ಮೆರವಣಿಗೆ ‌ನಡೆಸಲಾಯಿತು.

ADVERTISEMENT

ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಉದಯಕುಮಾರ ಗರ್ಜೆ, ಅಕ್ಷಯ ಗರ್ಜೆ, ನಾಗೇಶ ರಂಗದಾಳ, ಕಿರಣ ಆರ್ಯ, ನಾಗಭೂಷಣ, ವಿಜಯಕುಮಾರ ಶಾಲಗಾರ, ಸಂಜೀವಕುಮಾರ ಮತ್ತಿತರರು ಪಾಲ್ಗೊಂಡಿದ್ದರು.

ಹಬ್ಬಕ್ಕೆ ಸಿದ್ಧತೆ: ಗಣೇಶ ಚತುರ್ಥಿ ಅಂಗವಾಗಿ ನಗರದಲ್ಲಿನ ಹತ್ತಾರು ವೃತ್ತಗಳಲ್ಲಿ ಗಣೇಶ ಪ್ರತಿಷ್ಠಾಪನೆ ನೆರವೇರಲಿದೆ.‌ ಆದ್ದರಿಂದ ಶುಕ್ರವಾರ ಎಲ್ಲೆಡೆ ಆಕರ್ಷಕ ವೇದಿಕೆ ರಚನೆ, ವಿದ್ಯುತ್ ದೀಪಾಲಂಕಾರ ಕೈಗೊಂಡಿರುವುದು ಕಂಡು ಬಂತು. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಆಯೋಜಿಸಿ ಗಣೇಶ ಮಂಡಳಗಳಿಗೆ ಅಗತ್ಯ ಸಲಹೆ ಸೂಚನೆ ಸಹ ನೀಡಲಾಗಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಸಂಬಂಧ ಅಗತ್ಯವಿರುವ ಸಾಮಗ್ರಿಗಳ ಮತ್ತು ತರತರಹದ ಗಣೇಶ ಮೂರ್ತಿಗಳ ಮಾರಾಟ ಜೋರಾಗಿತ್ತು.

ಅದಕ್ಕೂ ಮೊದಲು ಗೌರಿ ಹಬ್ಬ ಸಹ ಆಚರಿಸಲಾಯಿತು. ಇದನ್ನು ಈ ಭಾಗದಲ್ಲಿ ಹರತಾಲಿಕಾ ಪೂಜನ್ ಎಂದು ಕರೆಯುವ ರೂಢಿ ಇದ್ದು ಮಹಿಳೆಯರು ಮನೆ ಮನೆಗೆ ಹೋಗಿ ದರ್ಶನ ಪಡೆದುಕೊಂಡು ಪ್ರಸಾದ ತೆಗೆದುಕೊಂಡು ಬರುತ್ತಿರುವುದು ಕಂಡು ಬಂತು.

ಬಸವಕಲ್ಯಾಣದಲ್ಲಿ ಶುಕ್ರವಾರ ಭವಾನಿ ಮಂದಿರ ಹತ್ತಿರದ ಸರ್ದಾರ ಪಟೇಲ್ ಚೌಕ್ ನಲ್ಲಿ ಪ್ರತಿಷ್ಠಾಪಿಸಲಿರುವ ಗಣೇಶನ ಮೆರವಣಿಗೆಯಲ್ಲಿ ವಾದ್ಯ ಮೇಳದವರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.