ಬೀದರ್: ‘ಗಣಪತಿ ಬಪ್ಪ ಮೊರ್‍ಯಾ, ಅಗ್ಲೇ ಬರಸ್ ತು ಜಲ್ದಿ ಆ...’ (ಗಣಪತಿ ತಂದೆಗೆ ಜಯವಾಗಲಿ, ಮುಂದಿನ ವರ್ಷ ನೀ ಬೇಗ ಬಾ..)
ಹೀಗೆ ಮುಗಿಲು ಮುಟ್ಟಿದ ಜಯಘೋಷಗಳ ನಡುವೆ ಗಣಪನ ಮೂರ್ತಿಗಳ ವಿಸರ್ಜನೆಯ ಮೆರವಣಿಗೆ ನಗರದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಕು ಹರಿಯುವವರೆಗೆ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು.
ನಗರದ ಹಳೆ ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್ ಸಿಂಗ್, ಬಸವೇಶ್ವರ ವೃತ್ತದಿಂದ ಚೌಬಾರ, ಮಹಮೂದ್ ಗಾವಾನ್ ಚೌಕ, ಶಹಾಗಂಜ್ ರಸ್ತೆಯುದ್ದಕ್ಕೂ ಭಾನುವಾರ ಸಂಜೆಯಿಂದ ಸೋಮವಾರ ಬೆಳಕಾಗುವವರೆಗೆ ಜನಜಾತ್ರೆ ಇತ್ತು. ಜನ ಕುಟುಂಬ ಸದಸ್ಯರೊಂದಿಗೆ ನಿದ್ದೆಗೆಟ್ಟು ರಸ್ತೆಯ ಇಕ್ಕೆಲ ಹಾಗೂ ಕಟ್ಟಡಗಳ ಮೇಲೆ ನಿಂತುಕೊಂಡು ಮೆರವಣಿಗೆ ಕಣ್ತುಂಬಿಕೊಂಡರು. ಬಸವೇಶ್ವರ ವೃತ್ತದಿಂದ ಚೌಬಾರ ತನಕ ಮೂರ್ತಿಗಳು ಸಾಲಾಗಿ ಮೆರವಣಿಗೆಯಲ್ಲಿ ಬಂದ ದೃಶ್ಯ ಕಣ್ಮನ ಸೆಳೆಯುವಂತಿತ್ತು.
ಡಿಜೆ ಸದ್ದಿಗೆ ಯುವಕರು ಮೈಮರೆತು ಕುಣಿದರು. ಆಗಾಗ ಬಂದು ಹೋದ ತುಂತುರು ಮಳೆ ಅವರ ಉತ್ಸಾಹ ಕುಂದಿಸಲಿಲ್ಲ. ಡೊಳ್ಳು ಬಾರಿಸಿದರು, ಭಗವಾ ಧ್ವಜ ಬೀಸಿದರು. ಗಣಪತಿ, ಶ್ರೀರಾಮನ ಪರ ಜಯಘೋಷ ಹಾಕಿದರು. ನಗರದ ದೇವಿ ಕಾಲೊನಿಯ ‘ಸಂಭಾಜಿ ಗಣಪ’, ನೌಬಾದ್ ಹಾಗೂ ಪ್ರತಾಪ್ ನಗರದ ಅರ್ಧಚಂದ್ರಾಕೃತಿ ಹಾಗೂ ಶಿವಲಿಂಗದ ಎದುರು ಕುಳಿತ ಗಣೇಶ, ಬೀದರ್ ಕಾ ರಾಜಾ, ಹನುಮಾನ ಗಣೇಶ ಮಂಡಳಿಯ ಬೆಳ್ಳಿಯ ಗಣಪ, ಬಸವ ನಗರದ ತಿರುಮಲ ತಿರುಪತಿ ಮಾದರಿಯ ಗಣಪ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದವು.
ಭಾನುವಾರ ರಾತ್ರಿ ಎಂಟು ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ರಾಮಮಂದಿರ ಗಣೇಶ ಹಾಗೂ ಚೌಬಾರ ಮೇಲಿನ ಬಾಲ ಗಂಗಾಧರ ತಿಲಕ್ ವೇದಿಕೆಯಲ್ಲಿ ಪೂಜೆ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಆದರೆ, ವಿವಿಧ ಬಡಾವಣೆಗಳ ಗಣೇಶನ ಮೂರ್ತಿಗಳೊಂದಿಗೆ ಮೂಲ ಸ್ಥಳದಿಂದ ಸಂಜೆ ಏಳು ಗಂಟೆಗೆ ಮೆರವಣಿಗೆ ಆರಂಭಿಸಿದವು. ರಾತ್ರಿ ಹತ್ತು ಗಂಟೆಯ ನಂತರ ಒಂದೊಂದೇ ಮೂರ್ತಿಗಳು ಬಸವೇಶ್ವರ ವೃತ್ತ ದಾಟಿಕೊಂಡು ಓಲ್ಡ್ ಸಿಟಿ ಪ್ರವೇಶಿಸಿದವು. ಎಲ್ಲಾ ಗಣೇಶನ ಮೂರ್ತಿಗಳಿಗೆ ಚೌಬಾರ ಎದುರು ಗಣೇಶ ಮಹಾಮಂಡಳದ ಪದಾಧಿಕಾರಿಗಳು ಸ್ವಾಗತಿಸಿ, ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಸೋಮವಾರ ನಸುಕಿನ ಜಾವ 4ಗಂಟೆಗೆ ಕೊನೆಯ ಮೂರ್ತಿ ಚೌಬಾರ ದಾಟಿತು.
ಶಹಾಗಂಜ್, ನಾವದಗೇರಿ ಮೂಲಕ ಮೂರ್ತಿಗಳನ್ನು ಬೀದರ್ ತಾಲ್ಲೂಕಿನ ಕಂದಗೂಳ ಸಮೀಪದ ಮಾಂಜ್ರಾ ನದಿಯಲ್ಲಿ ಅತ್ಯಂತ ಭಕ್ತಿಭಾವದಿಂದ ವಿಸರ್ಜಿಸಲಾಯಿತು. ಎಲ್ಲ ಮೂರ್ತಿಗಳ ಮೆರವಣಿಗೆ ಮುಗಿಯುವುದರಲ್ಲಿ ಸೋಮವಾರ ಬೆಳಿಗ್ಗೆ 8.30ಗಂಟೆ ಆಗಿತ್ತು. ನಗರದ 36 ದೊಡ್ಡ ವಿನಾಯಕನ ಮೂರ್ತಿಗಳನ್ನು ಮಾಂಜ್ರಾ ನದಿಯಲ್ಲಿ ವಿಸರ್ಜಿಸಿದರೆ, ಅಸಂಖ್ಯ ಚಿಕ್ಕ ಹಾಗೂ ಮಧ್ಯಮ ಗಾತ್ರದ ಮೂರ್ತಿಗಳನ್ನು ನಗರದ ಹಳ್ಳದಕೇರಿ ಕೆರೆಯ ಸಮೀಪ ನಿರ್ಮಿಸಿರುವ ನೂತನ ಗಣೇಶನ ಹೊಂಡದಲ್ಲಿ ವಿಸರ್ಜಿಸಲಾಯಿತು.
ಝಗಮಗಿಸುವ ವಿದ್ಯುತ್ ದೀಪ, ಸ್ವಾಗತ ಕಮಾನು, ಸಂಗೀತದಿಂದ ಮದುವೆ ಮನೆಯಂತೆ ಕಂಗೊಳಿಸುತ್ತಿದ್ದ ಬೀದರ್ ನಗರದಲ್ಲಿ ಸೋಮವಾರ ಬೆಳಿಗ್ಗೆ ಐದು ದಿನಗಳ ಗಣೇಶ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿತ್ತು.
ಮಹಾಮಂಡಳ ಸಂತಸ
‘2025ನೇ ಸಾಲಿನ ಗಣೇಶ ಉತ್ಸವದ ಮೆರವಣಿಗೆ ಅತ್ಯಂತ ವಿಜೃಂಭಣೆ ಶಾಂತಿ ಸೌಹಾರ್ದದಿಂದ ಆಚರಿಸಿರುವುದು ಸಂತಸ ತಂದಿದೆ’ ಎಂದು ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಸ್ವಾಗತ ಸಮಿತಿಯ ಅಧ್ಯಕ್ಷ ನಂದ ಕಿಶೋರ್ ವರ್ಮಾ ಮೆರವಣಿಗೆ ಸಮಿತಿಯ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ತಿಳಿಸಿದ್ದಾರೆ. ಅತ್ಯುತ್ತಮ ಗಣೇಶ ಮಂಡಳಿಗಳ ಹೆಸರು ಇನ್ನೆರಡು ದಿನಗಳಲ್ಲಿ ಘೋಷಿಸಿ ಅವರಿಗೆ ಬಹುಮಾನ ವಿತರಿಸಲಾಗುವುದು. ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಇಲಾಖೆ ಜೆಸ್ಕಾಂ ನಗರಸಭೆ ಅಗ್ನಿಶಾಮಕ ದಳ ಹಾಗೂ ವಿವಿಧ ಗಣೇಶ ಮಂಡಳಗಳ ಸಹಕಾರದಿಂದ ಸುಸೂತ್ರವಾಗಿ ಮೆರವಣಿಗೆ ನಡೆದಿದೆ. ಪ್ರತಿ ವರ್ಷ ಇದೇ ರೀತಿ ಕಾರ್ಯಕ್ರಮ ಜರುಗಬೇಕಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಡರಾತ್ರಿ 3ಗಂಟೆಗೆ ಜಿಲ್ಲಾಧಿಕಾರಿ ಪೂಜೆ
ಬೀದರ್‌ನ ಚೌಬಾರ ಎದುರು ಆಗಮಿಸಿದ ‘ಬೀದರ್ ಕಾ ರಾಜಾ’ ಗಣಪತಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಡರಾತ್ರಿ 3 ಗಂಟೆಗೆ ಪೂಜೆ ಸಲ್ಲಿಸಿದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಸುಕಿನ ಜಾವ 4 ಗಂಟೆಗೆ ಪ್ರತಾಪ್ ನಗರ–ನೌಬಾದ್ ಗಣೇಶನಿಗೆ ಪೂಜೆ ಸಲ್ಲಿಸಿ ಕಾಯಿ ಒಡೆದು ಹೂಮಳೆಗರೆದು ಸ್ವಾಗತಿಸಿದರು. ಹೀಗೆ 4ಗಂಟೆಗೆ ಎಲ್ಲಾ ಮೂರ್ತಿಗಳು ಚೌಬಾರ ದಾಟಿದವು. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಮೂರ್ತಿಗಳ ಮೆರವಣಿಗೆ ಮುಗಿಯುವವರೆಗೆ ಖುದ್ದು ಸ್ಥಳದಲ್ಲಿ ಹಾಜರಿದ್ದು ಮೆರವಣಿಗೆಯ ಮಾರ್ಗದಲ್ಲಿ ಓಡಾಡಿ ಪರಿಶೀಲಿಸಿದರು. ಹೋದ ವರ್ಷ ಡಿಜೆ ವಿಚಾರದಲ್ಲಿ ಗಣೇಶ ಮಂಡಳಿಗಳು ಹಾಗೂ ಪೊಲೀಸ್ ಇಲಾಖೆ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಮೆರವಣಿಗೆ ಸುಸೂತ್ರವಾಗಿ ನಡೆದಿರಲಿಲ್ಲ. ಆದರೆ ಈ ಸಲ ಅಂತಹ ಯಾವುದೇ ಗೊಂದಲಕ್ಕೆ ಆಸ್ಪದ ಸಿಗಲಿಲ್ಲ.
ಗಣೇಶ ವಿಸರ್ಜನೆ ಹೊಂಡ ಉದ್ಘಾಟನೆ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ನ ಹಳ್ಳದಕೇರಿ ಕೆರೆ ಮಗ್ಗುಲಲ್ಲಿ ನಿರ್ಮಿಸಿರುವ ₹2 ಕೋಟಿ ವೆಚ್ಚದ ಗಣೇಶ ವಿಸರ್ಜನೆಯ ಹೊಂಡದ ಬಳಿ ಮಣ್ಣಿನ ಗಣಪನಿಗೆ ಪೂಜೆ ನೆರವೇರಿಸಿ ಮೂರ್ತಿ ವಿಸರ್ಜಿಸುವ ಮೂಲಕ ಹೊಂಡ ಉದ್ಘಾಟಿಸಿದರು. ‘ನಾನು ಬಿಡಿಎ ಅಧ್ಯಕ್ಷನಿದ್ದಾಗ ಹೊಂಡ ನಿರ್ಮಾಣಕ್ಕೆ ₹2ಕೋಟಿ ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದೆ. ಈಗ ಅದು ಪೂರ್ಣಗೊಂಡು ಸಚಿವರು ಉದ್ಘಾಟಿಸಿರುವುದು ಖುಷಿಯ ವಿಚಾರ’ ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿಯೂ ಆದ ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ ಹೇಳಿದರು. ‘ಹೊಂಡದ ಎದುರಿನ ಶಹಾಪುರ ಗೇಟ್‌ನಿಂದ ಗುಂಪಾ ರಿಂಗ್ ರೋಡ್ ವೃತ್ತದ ರಸ್ತೆಗೆ ಬಾಲಗಂಗಾಧರ ತಿಲಕ ಮಾರ್ಗ್ ಎಂದು ಜಿಲ್ಲಾಡಳಿತ ಹೆಸರಿಡಬೇಕು’ ಎಂದು ಮನವಿ ಮಾಡಿದರು. ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ ರಾಜಾರಾಮ್ ಚಿಟ್ಟಾ. ರಾಜು ಚಿಂತಾಮಣಿ ಮಹಾಮಂಡಳದ ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ ಸೂರ್ಯಕಾಂತ ಶೆಟಕಾರ್ ದೀಪಕ್ ವಾಲಿ ರಮೇಶ್ ಬಿರಾದಾರ ಚಿಟ್ಟಾ ಸಂತೋಷ್ ಪಾಟೀಲ ಜೈರಾಜ್ ಖಂಡ್ರೆ ಮನೋಹರ್ ದಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.