ADVERTISEMENT

ಖಟಕಚಿಂಚೋಳಿ: ನಿರಾಶ್ರಿತರ ಗೆಳೆಯ ‘ಸ್ವಾಭಿಮಾನಿ ಬಳಗ’

ಬಡವರಿಗೆ ಹೊದಿಕೆ, ಬಟ್ಟೆ ವಿತರಣೆ; ಹೊಸ ವರ್ಷ ವಿನೂತನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:34 IST
Last Updated 1 ಜನವರಿ 2023, 6:34 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ನಿರಾಶ್ರಿತರಿಗೆ ಗೆಳೆಯರ ಬಳಗದಿಂದ ಶನಿವಾರ ಉಚಿತ ಬಟ್ಟೆ ವಿತರಿಸಲಾಯಿತು
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ನಿರಾಶ್ರಿತರಿಗೆ ಗೆಳೆಯರ ಬಳಗದಿಂದ ಶನಿವಾರ ಉಚಿತ ಬಟ್ಟೆ ವಿತರಿಸಲಾಯಿತು   

ಖಟಕಚಿಂಚೋಳಿ: ಹೊಸ ವರ್ಷವನ್ನು ಕೇಕ್ ಕತ್ತರಿಸಿ, ಕುಣಿದು ಕುಪ್ಪಳಿಸುವ ಬದಲು ‘ಸ್ವಾಭಿಮಾನಿ ಗೆಳೆಯರ ಬಳಗ’ದ ಸದಸ್ಯರು ಬಡವರ, ನಿರಾಶ್ರಿತರಿಗೆ ನೆರವಾಗುವ ಮೂಲಕ ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸುತ್ತಿದ್ದಾರೆ.

ಬಳಗದ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ರೈಲು ನಿಲ್ದಾಣ, ರಸ್ತೆ ಬದಿ, ದೇವಸ್ಥಾನದ ಆವರಣ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ವಾಸಿಸುವ ಬಡವರಿಗೆ, ನಿರಾಶ್ರಿತರಿಗೆ ಉಚಿತವಾಗಿ ಬೆಚ್ಚನೆಯ ಹೊದಿಕೆ, ಬಟ್ಟೆ, ಊಟ ವಿತರಿಸುತ್ತಿದ್ದಾರೆ.

ಗೆಳೆಯರ ಬಳಗದ ಸದಸ್ಯರ ಸಂಖ್ಯೆ 90. ಪ್ರತಿಯೊಬ್ಬರಿಂದ ₹ 500 ಜಮಾಯಿಸಲಾಗಿದೆ. ಜಿಲ್ಲೆಯಾದ್ಯಂತ 250 ಕ್ಕೂ ಹೆಚ್ಚು ಜನರಿಗೆ ಈಗಾಗಲೇ ಹೊದಿಕೆ, ಬಟ್ಟೆ ವಿತರಿಸಲಾಗಿದೆ. ಇನ್ನೂ ವಿತರಿಸುವ ಗುರಿಯನ್ನು ಬಳಗವು ಹೊಂದಿದೆ.

ADVERTISEMENT

ಹಾಲಹಳ್ಳಿ ಸೇರಿದಂತೆ ವಿವಿಧೆಡೆ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿರುವುದು ಸ್ವಾಭಿಮಾನಿ ಗೆಳೆಯರ ಬಳಗದ ಸಾಧನೆಗಳಲ್ಲೊಂದು. ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಪೆನ್ನು, ಪೆನ್ಸಿಲ್ ನೀಡಿದ್ದಾರೆ. ಇದೀಗ ಬಡವರಿಗೆ ನೆರವಾಗುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

‘ನಮ್ಮ ಸಂಘದ ಸದಸ್ಯರು ಯಾವುದೇ ಸರ್ಕಾರದ ಹುದ್ದೆಯಲ್ಲಿಲ್ಲ. ಎಲ್ಲರೂ ಚಿಕ್ಕಪುಟ್ಟ ವ್ಯವಹಾರ ಮಾಡುತ್ತಾರೆ. ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎನ್ನುವುದು ಎಲ್ಲರ ಇಚ್ಚೆಯಾಗಿದೆ. ಅದರಂತೆ ಎಲ್ಲರೂ ತಮ್ಮ ದುಡಿಮೆಯ ಸ್ವಲ್ಪ ಹಣ ಉಳಿಸಿ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಗೆಳೆಯರ ಬಳಗದ ಪ್ರವೀಣ ಅಮ್ಮಾಜಿ.

‘ಪ್ರಸಕ್ತ ಸಾಲಿನಲ್ಲಿ ನಾವು ಹಿಂದೆ ಮಾಡಿದ ಚಟುವಟಿಕೆಗಳನ್ನು ಮುಂದುವರಿಸುವುದರ ಜೊತೆಗೆ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ್ದೇವೆ. ಅಲ್ಲದೇ ನಮ್ಮ ಸಂಘದ ಹೆಸರಿನಲ್ಲಿ ನರ್ಸರಿ ಪ್ರಾರಂಭಿಸುವ ಯೋಜನೆ ಇದೆ’ ಎಂದು ಬಳಗದ ಸೋಮನಾಥ ಕಟ್ಟಿ ತುಗಾಂವ್ ತಿಳಿಸುತ್ತಾರೆ.

‘ಕೆಲವರು ಹಳೆಯ ಬಟ್ಟೆ, ಪಾತ್ರೆ ಸಾಮಗ್ರಿ ಸೇರಿದಂತೆ ಇತರೆ ವಸ್ತುಗಳನ್ನು ಬಳಸದೆ ಮನೆಯ ಯಾವುದೋ ಒಂದು ಮೂಲೆಯಲ್ಲಿ ಇಟ್ಟಿರುತ್ತಾರೆ. ಅವುಗಳು ಅಲ್ಲೇ ದೂಳು ತಿನ್ನುತ್ತ ಹಾಳಾಗುತ್ತಿರುತ್ತವೆ. ಮತ್ತೆ ಕೆಲವರು, ಬಹಳ ಕಡಿಮೆ ಬೆಲೆಗೆ ಗುಜರಿಗೆ ಹಾಕುತ್ತಾರೆ. ಹೀಗೆ ಮಾಡುವ ಬದಲು ಅವುಗಳನ್ನು ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರಿಗೆ ಕೊಟ್ಟರೆ ಬಡವರು, ನಿರ್ಗತಿಕರು ಹಾಗೂ ಅನಾಥಾಶ್ರಮದಲ್ಲಿ ಇರುವವರಿಗೆ ತಲುಪಿಸುತ್ತೇವೆ’ ಎಂದು ಗೆಳೆಯರ ಬಳಗದ ಅಧ್ಯಕ್ಷ ಚಂದು ಪಡಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.