ADVERTISEMENT

ಉದ್ಯಮ ಆರಂಭಿಸಲು ಸಕಲ ನೆರವು: ಸಚಿವ ಜಗದೀಶ ಶೆಟ್ಟರ ಭರವಸೆ

ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 15:44 IST
Last Updated 31 ಆಗಸ್ಟ್ 2020, 15:44 IST
ಬೀದರ್‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೀದರ್ ಜಿಲ್ಲೆಯ ಕೈಗಾರಿಕೋದ್ಯಮಿಗಳೊಂದಿಗೆ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಸಂವಾದ ನಡೆಸಿದರು. ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ರಘುನಾಥರಾವ್‌ ಮಲ್ಕಾಪುರೆ, ಬಂಡೆಪ್ಪ ಕಾಶೆಂಪೂರ್, ಅರವಿಂದಕುಮಾರ ಅರಳಿ ಇದ್ದಾರೆ
ಬೀದರ್‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೀದರ್ ಜಿಲ್ಲೆಯ ಕೈಗಾರಿಕೋದ್ಯಮಿಗಳೊಂದಿಗೆ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಸಂವಾದ ನಡೆಸಿದರು. ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ರಘುನಾಥರಾವ್‌ ಮಲ್ಕಾಪುರೆ, ಬಂಡೆಪ್ಪ ಕಾಶೆಂಪೂರ್, ಅರವಿಂದಕುಮಾರ ಅರಳಿ ಇದ್ದಾರೆ   

ಬೀದರ್‌: ‘ಬೀದರ್‌ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆದಾರರು ಉದ್ಯಮ ಆರಂಭಿಸಲು ಆಸಕ್ತಿ ತೋರಿಸಿದರೆ ರಾಜ್ಯ ಸರ್ಕಾರದ ವತಿಯಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ಧ’ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೀದರ್ ಜಿಲ್ಲೆಯ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದ ನಂತರ ಅವರು ಮಾತನಾಡಿದರು.

‘ಕೈಗಾರಿಕೆ ಸ್ಥಾಪನೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವುದು ಸರ್ಕಾರದ ಕೆಲಸ. ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳೇ ಮುಂದೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಅಧಿಕಾರಿಗಳಿಗೆ ಮೊದಲು ತರಬೇತಿ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಉದ್ಯಮಿಗಳು ಕರ್ನಾಟಕ ಅಂದರೆ ಕೇವಲ ಬೆಂಗಳೂರು ಎಂದೇ ಭಾವಿಸಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಮನವರಿಕೆ ಮಾಡುತ್ತಿದ್ದೇವೆ. ಆಯಾ ಜಿಲ್ಲೆಗಳಲ್ಲಿ ದೊಡ್ಡ ಉದ್ಯಮಗಳನ್ನು ಸ್ಥಾ‍ಪನೆ ಮಾಡಲು ಜನಪ್ರತಿನಿಧಿಗಳು ಆಸಕ್ತಿ ತೋರಿಸಬೇಕು. ರಾಜ್ಯ ಸರ್ಕಾರ ಎರಡು ಸಾವಿರ ಎಕರೆ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಸಿದ್ಧವಿದೆ’ ಎಂದು ಮನವಿ ಮಾಡಿದರು.

‘ಬೀದರ್‌ ಜಿಲ್ಲೆ ಕೈಗಾರಿಕೆ ಸ್ಥಾಪನೆಯಲ್ಲಿ ಹಿಂದೆ ಉಳಿದಿದೆ. ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ಹೊಸ ಉದ್ಯಮಗಳಿಗೆ ಅನುಮತಿ ಕೊಡಲು ಅವಕಾಶ ಇದೆ. ಈಗಾಗಲೇ ಏಕಗವಾಕ್ಷಿ ಪದ್ಧತಿ ಮೂಲಕ ಅನುಮತಿ ಕೊಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಬ್ಯಾಂಕರ್‌ಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಇದಕ್ಕೂ ಮೊದಲು ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ‘ಜಿಲ್ಲೆಯ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಅನೇಕ ಜನ ಗಾರ್ಮೆಂಟ್‌ ಉದ್ಯಮ ಆರಂಭಿಸಲು ಆಸಕ್ತಿ ತೋರಿಸಿದ್ದಾರೆ. ಗಾರ್ಮೆಂಟ್‌ ಉದ್ಯಮ ಆರಂಭವಾದರೆ ಐದು ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ‘ಕೈಗಾರಿಕೆ ತ್ಯಾಜ್ಯಗಳ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಬೇಗ ಮುಗಿಸಲು ಕ್ರಮಕೈಗೊಳ್ಳಬೇಕು. ಬೀದರ್‌ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಬೇಕು’ ಎಂದು ಮನವಿ ಮಾಡಿದರು.

ಬಿದರಿ ಕಲಾಕೃತಿಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಲಾಕ್‌ಡೌನ್‌ ಅವಧಿಯಲ್ಲಿ ಕಲಾವಿದರ ಬದುಕು ಕಷ್ಟವಾಗಿದೆ. ಕಲಾವಿದರಿಗೆ ಹಣಕಾಸಿನ ನೆರವು ಅಗತ್ಯವಿಲ್ಲ. ದುಡಿಯುವ ಕಲಾವಿದರಿಗೆ ಉದ್ಯೋಗ ಕೊಡಬೇಕು ಎಂದು ಬಿದರಿ ಕಲಾವಿದರೊಬ್ಬರು ಮನವಿ ಮಾಡಿಕೊಂಡರು.

ದಿ ಗ್ರೇನ್‌ ಆ್ಯಂಡ್‌ ಸೀಡ್ಸ್‌ ಮರ್ಚಂಟ್‌ ಅಸೋಸಿಯೇಷನ್‌ ಅಧ್ಯಕ್ಷ ಬಸವರಾಜ ಧನ್ನೂರ್ ಮಾತನಾಡಿ, ಬೀದರ್‌ ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ 40 ದಾಲ್‌ ಮಿಲ್‌ಗಳಿದ್ದವು. ಕೇಂದ್ರ ಸರ್ಕಾರ ಬೆಂಬಲ ನೀಡಿ ಬೇಳೆ ಕಾಳುಗಳನ್ನು ಖರೀದಿ ಮಾಡುತ್ತಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಶೇಕಡ 60 ರಷ್ಟು ಮಿಲ್‌ಗಳು ಬಂದ್‌ ಆಗಿವೆ. ದಾಲ್‌ಮಿಲ್‌ಗಳಿಗೆ ಪುನಶ್ಚೇತನ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಮಿಕಲ್‌ ಇಂಡ್‌ಸ್ಟ್ರೀಸ್‌ ಅಸೋಸಿಯೇಷನ್‌ನ ದೇವೇಂದ್ರ, ಶಿವರಾಜ್‌ ಎನಶೆಟ್ಟಿ, ವಿಜಯಕುಮಾರ ಹಾಗೂ ವಿಶಾಲ ಅವರು ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಜಿಲ್ಲಾಧಿಕಾರಿ ರಾಮಚಂದ್ರನ್‌, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮನೋಳಿ, ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಬಿ.ಎ.ಕಮತಗಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.