ADVERTISEMENT

ಕನ್ನಡ ಸಿನಿಮಾಗಳಿಗೆ ಜಾಗತಿಕ ವೇದಿಕೆಗೆ ಸರ್ಕಾರದಿಂದ ಒಟಿಟಿ: ಮಹಬೂಬ್ ಪಾಷಾ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 12:46 IST
Last Updated 5 ನವೆಂಬರ್ 2025, 12:46 IST
<div class="paragraphs"><p>ಮಹಬೂಬ್ ಪಾಷಾ</p></div>

ಮಹಬೂಬ್ ಪಾಷಾ

   

ಬೀದರ್‌: ‘ಜಾಗತಿಕ ಮಟ್ಟದಲ್ಲಿ ಕನ್ನಡ ಸಿನಿಮಾಗಳಿಗೆ ವೇದಿಕೆ ಕಲ್ಪಿಸಲು ಮುಂದಿನ ವರ್ಷ ಸರ್ಕಾರದಿಂದಲೇ ಒಟಿಟಿ ಪ್ರಾರಂಭಿಸಲು ನಿರ್ಧರಿಸಲಾಗಿದೆ’ ಎಂದು ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ್ ಪಾಷಾ ತಿಳಿಸಿದರು.

ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ಸಹ ರಚಿಸಲಾಗಿದೆ. ಅಮೆಜಾನ್, ಜೀ5, ಜಿಯೋ ಹಾಟ್‍ಸ್ಟಾರ್, ನೆಟ್‍ಫ್ಲಿಕ್ಸ್ ಸೇರಿದಂತೆ ಇತರೆ ಒಟಿಟಿಗಳಲ್ಲಿ ಕನ್ನಡದ ಆಯ್ದ ಚಲನಚಿತ್ರಗಳಿಗೆ ವೇದಿಕೆ ಸಿಗುತ್ತಿದೆ. ಇದರಿಂದಾಗಿ ಸುಮಾರು 4 ಸಾವಿರಕ್ಕೂ ಅಧಿಕ ಕನ್ನಡ ಸಿನಿಮಾಗಳು ಬಿಡುಗಡೆಗೊಂಡಿಲ್ಲ. ವಿತರಕರು ಹಾಗೂ ಚಿತ್ರ ಮಂದಿರಗಳ ಸಮಸ್ಯೆಯೂ ಕಾಡುತ್ತಿದೆ. ನಿರ್ಮಾಕರು, ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಇದ್ದಾರೆ. ಎಲ್ಲಾ ಕನ್ನಡ ಸಿನಿಮಾಗಳಿಗೆ ವೇದಿಕೆ ಕಲ್ಪಿಸಿ ಸಂಕಷ್ಟದಲ್ಲಿ ಹೊರತರಲಾಗುವುದು ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ADVERTISEMENT

ಒಟಿಟಿ ಸ್ಥಾಪನೆಯಿಂದ ಕನ್ನಡ ಸಿನಿಮಾಗಳ ಜೊತೆಗೆ ಧಾರವಾಹಿ, ಜಾನಪದ ಕಲೆ, ಸ್ಥಳೀಯ ಮತ್ತು ಬುಡಕಟ್ಟು ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ದೊರಕಲಿದೆ. ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರಗಳ ವೀಕ್ಷಣೆಗೆ ಹೆಚ್ಚಿನ ದರ ವಿಧಿಸಿದರೆ, ರಾಜ್ಯ ಸರ್ಕಾರ ಪ್ರಾರಂಭಿಸುವ ಒಟಿಟಿ ವೇದಿಕೆಯಲ್ಲಿ ಅಲ್ಪ ಮೊತ್ತ ಪಾವತಿಸಿ, ವಿಶ್ವದ ಎಲ್ಲೆಡೆ ಇರುವ ಕನ್ನಡಿಗರು ಚಂದಾದರರಾಗಿ ಕನ್ನಡ ಸಿನಿಮಾ ನೋಡಬಹುದು ಎಂದರು.

ಕಂಠೀರವ ಸ್ಟುಡಿಯೋಸ್‌ಗೆ 60 ವರ್ಷ:

ಸರ್ಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋಸ್ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವ ಆಚರಣೆಗೆ ಉದ್ದೇಶಿಸಲಾಗಿದೆ. ಸಿನಿಮಾ ನಿರ್ಮಾಣ, ಸ್ಟುಡಿಯೋ ಕುರಿತು ವಿಚಾರ ಸಂಕಿರಣ, ಕಂಠೀರವ ಸ್ಟುಡಿಯೋಸ್ ನಿರ್ಮಾಣದ ಸ್ಥಾಪಕ ಟಿ.ಎಸ್.ಕರಿಬಸವಯ್ಯ ಪುತ್ಥಳಿ ನಿರ್ಮಾಣ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಚಲನಚಿತ್ರ ನಿರ್ಮಾಣ, ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕಂಠೀರವ ಸ್ಟುಡಿಯೋಸ್ ವಜ್ರ ಮಹೋತ್ಸವ ಆಚರಣೆಗಾಗಿ ಸರ್ಕಾರದಿಂದ ಈಗಾಗಲೇ ₹1 ಕೋಟಿ ಅನುದಾನ ಮಂಜೂರಾಗಿದೆ. ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ವಜ್ರ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಗುಬ್ಬಿ ವೀರಣ್ಣ, ಟಿ.ಎಸ್.ಕರಿಬಸಯ್ಯ ಮತ್ತಿತರರು 1966ರಲ್ಲಿ ಕಂಠೀರವ ಸ್ಟುಡಿಯೋಸ್‌ಗೆ ಬೆಂಗಳೂರಿನಲ್ಲಿ ಜಮೀನು ಖರೀದಿಸಿ, ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಿದ್ದರು. ಇದಕ್ಕೂ ಪೂರ್ವದಲ್ಲಿ ಕನ್ನಡ ಚಲನಚಿತ್ರ ನಿರ್ಮಾಣ ಕುರಿತ ಕೆಲಸ ಕಾರ್ಯಗಳಿಗೆ ಮದ್ರಾಸ್‍ಗೆ ಹೋಗಬೇಕಿತ್ತು. ಹೀಗಾಗಿ ಇಲ್ಲಿಯೇ ಚಲನಚಿತ್ರಗಳ ನಿರ್ಮಾಣಕ್ಕೆ ಸಂಬಧಿಸಿದ ಕೆಲಸಗಳು ಆಗಬೇಕು ಎನ್ನುವ ಕಾರಣಕ್ಕಾಗಿ, ಮೊಟ್ಟ ಮೊದಲನೆಯ ಕಂಠೀರವ ಸ್ಟುಡಿಯೋಸ್‍ಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರು ₹5 ಲಕ್ಷ ಅನುದಾನ ನೀಡಿ, ಪ್ರೋತ್ಸಾಹಿಸಿದ್ದರು. ಬಳಿಕ ಕಂಠೀರವ ಸ್ಟುಡಿಯೋವನ್ನು ನಡೆಸಲು ಸಾಧ್ಯವಾಗದಿದ್ದಾಗ 1974 ರಲ್ಲಿ ಸರ್ಕಾರ ವಶಕ್ಕೆ ಪಡೆಯಿತು. ಅಂದಿನಿಂದಲೂ ಸರ್ಕಾರವೇ ಕಂಠೀರವ ಸ್ಟುಡಿಯೋ ನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.