ADVERTISEMENT

ನಿರಂತರ ಕ್ರೀಡಾ ಚಟುವಟಿಕೆಯ ಕೇಂದ್ರ

ಪ್ರತಾಪುರ ಸರ್ಕಾರಿ ಶಾಲೆಯಲ್ಲಿ ಕೊಠಡಿ, ಆಟದ ಮೈದಾನಗಳ ಕೊರತೆಯಿಲ್ಲ

ಮಾಣಿಕ ಆರ್ ಭುರೆ
Published 19 ನವೆಂಬರ್ 2019, 19:45 IST
Last Updated 19 ನವೆಂಬರ್ 2019, 19:45 IST
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಕವಾಯಿತು ಪ್ರದರ್ಶಿಸಿರುವುದು
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಕವಾಯಿತು ಪ್ರದರ್ಶಿಸಿರುವುದು   

ಬಸವಕಲ್ಯಾಣ: ತಾಲ್ಲೂಕಿನ ಪ್ರತಾಪುರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯು ನಿರಂತರ ಕ್ರೀಡಾ ಚಟುವಟಿಕೆಗಳ ಕೇಂದ್ರವಾಗಿ ಎಲ್ಲರ ಗಮನ ಸೆಳೆದಿದೆ.

ಈ ಶಾಲೆ ತಾಲ್ಲೂಕಿನ ಹಳೆಯ ಹಾಗೂ ದೊಡ್ಡ ಶಾಲೆಗಳಲ್ಲೊಂದು. 254 ವಿದ್ಯಾರ್ಥಿಗಳು 20 ಕೊಠಡಿಗಳು ಹಾಗೂ 14 ಶಿಕ್ಷಕರಿದ್ದಾರೆ. ಆಟದ ಮೈದಾನ, ಸುತ್ತಲಿನಲ್ಲಿ ಆವರಣಗೋಡೆ, ಅದಕ್ಕೆ ಎತ್ತರದ ಗೇಟ್ ಇದೆ. ಕುಡಿಯುವ ನೀರಿಗಾಗಿ ಕೊಳವೆಬಾವಿ ಇದೆ. ಪ್ರತಿದಿನವೂ ಸಮವಸ್ತ್ರ ಧರಿಸಿದ 10 ವಿದ್ಯಾರ್ಥಿಗಳ ತಂಡದಿಂದ ಡ್ರಮ್ ಬಾರಿಸುವ ಜತೆಗೆ ಶಿಸ್ತಿನಿಂದ ಪ್ರಾರ್ಥನೆ ನಡೆಯುತ್ತದೆ.

ಇಲ್ಲಿ ಬೋಧನೆಯ ಜತೆಗೆ ಆಟವನ್ನೂ ನಿಯಮಿತವಾಗಿ ಆಡಿಸಲಾಗುತ್ತದೆ. ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಪ್ರತಿವರ್ಷ ತಾಲ್ಲೂಕುಮಟ್ಟಕ್ಕೆ ಆಯ್ಕೆ ಆಗುತ್ತಾರೆ. ಭಾಗ್ಯಶ್ರೀ ಹಾಗೂ ಸ್ನೇಹಾ ಥ್ರೋಬಾಲ್ ನಲ್ಲಿ ಸತತವಾಗಿ ಮೂರು ವರ್ಷಗಳವರೆಗೆ ತಾಲ್ಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದರು. ವಿಜ್ಞಾನ ಪ್ರಯೋಗಾಲಯದ
ವ್ಯವಸ್ಥೆ ಇರುವುದರಿಂದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

`ಪ್ರತ್ಯೇಕವಾದ ಕ್ರೀಡಾ ಕೊಠಡಿ ಇದೆ. ಇಲ್ಲಿ 16 ಆಟಗಳ ಮಾಹಿತಿಯುಳ್ಳ ಚಾರ್ಟ್‌ಗಳನ್ನು ಗೋಡೆಗೆ ತೂಗು ಹಾಕಲಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳ ಪರಿಚಯ ಹಾಗೂ ಭಾವಚಿತ್ರಗಳು ಕೂಡ ಇವೆ. ಆಟಗಳ ನಿಯಮ, ಮೈದಾನದ ಅಳತೆ, ಯೋಗ, ಪ್ರಥಮ ಚಿಕಿತ್ಸೆ, ಸಮತೋಲನ ಆಹಾರದ ಮಾಹಿತಿಯೂ ಇಲ್ಲಿ ದೊರಕುತ್ತದೆ. ಮಕ್ಕಳಿಗೆ ಇದರಿಂದ ಪ್ರೇರಣೆ ದೊರಕುತ್ತದೆ. ವಿವಿಧ ಆಟಗಳಲ್ಲಿ ಭಾಗವಹಿಸಲು ಆಸಕ್ತಿ ಹುಟ್ಟುತ್ತದೆ' ಎಂದು ಮುಖ್ಯಶಿಕ್ಷಕಿ ಮಮತಾ ಎಸ್. ಜಡಗೆ ಹೇಳಿದ್ದಾರೆ.

‘ಶಾಲೆ ಕ್ರೀಡಾ ಚಟುವಟಿಕೆಗಳಲ್ಲಿ ತಾಲ್ಲೂಕಿನಲ್ಲಿಯೇ ಮುಂದಿದೆ. ಇದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಶ್ರಮ ಅಡಗಿದೆ' ಎಂದು ಸಂಪನ್ಮೂಲ ವ್ಯಕ್ತಿ ಅಂಬಣ್ಣ ಘಾಂಗ್ರೆ ಹೇಳುತ್ತಾರೆ.

`ಪ್ರತಿ ರಾಷ್ಟ್ರೀಯ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಯೋಗಾಸನ ಪ್ರದರ್ಶನ, ಪಿರಾಮಿಡ್ ರಚನೆ, ಕವಾಯಿತು, ಜಿಮ್ನಾಸ್ಟಿಕ್ ಹಾಗೂ ನೃತ್ಯ, ನಾಟಕ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ ನಡೆಯುತ್ತದೆ. ಇದನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ' ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ರತನ ಗಾಯಕವಾಡ, ಮುಖಂಡ ಪಿಂಟು ಕಾಂಬಳೆ ಶ್ಲಾಘಿಸಿದ್ದಾರೆ.

`ವಿದ್ಯಾರ್ಥಿಗಳು ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತಮವಾಗಿ ಪ್ರದರ್ಶಿಸುತ್ತಾರೆ. ಹೀಗಾಗಿ ಎರಡು ಸಲ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದಿದ್ದರು' ಎಂದು ಶಿಕ್ಷಕರಾದ ಶಿವಕುಮಾರ ಬಿರಾದಾರ, ರೇಖಾ ಗೋಸಾಯಿ, ಮಕಬುಲಸಾಬ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.