ADVERTISEMENT

ಆರನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ಕೊಡಲಾಗದು: ಲಕ್ಷ್ಮಣ ಸವದಿ ಸ್ಪಷ್ಟ ನುಡಿ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 12:58 IST
Last Updated 11 ಏಪ್ರಿಲ್ 2021, 12:58 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ    

ಬೀದರ್‌: ‘ಸದ್ಯದ ಸ್ಥಿತಿಯಲ್ಲಿ ಆರನೇ ವೇತನ ಆಯೋಗ ಶಿಫಾರಸು ಮಾಡಿದ ವೇತನಕ್ಕೆ ಸಮಾನವಾದ ವೇತನ ಕೊಡಲು ಸಾಧ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

ಹುಮನಾಬಾದ್ ತಾಲ್ಲೂಕಿನ ಮಾಣಿಕನಗರದ ಖಾಸಗಿ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಾರಿಗೆ ನಿಗಮದ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಿದರೆ ಬೇರೆ ನಿಗಮಗಳ ನೌಕರರಿಗೆ ತಾರತಮ್ಯ ಮಾಡಿದಂತೆ ಆಗಲಿದೆ. ಅದು ಸಂಘರ್ಷಕ್ಕೂ ಕಾರಣವಾಗುತ್ತದೆ’ ಎಂದರು.

‘ಸಾರಿಗೆ ನೌಕರರಿಗೆ ಈಗಾಗಲೇ ಬಾಟಾ, ಓಟಿ, ಇನ್ಸೆಂಟಿವ್ ನೀಡಲಾಗುತ್ತಿದೆ. ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿದರೆ ಎರಡು ಗಂಟೆಗಳ ಅವಧಿ ಪರಿಗಣಿಸಲಾಗುತ್ತಿದೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾದರೆ ಮುಂದಿನ ದಿನಗಳಲ್ಲಿ ಸಮಾಲೋಚನೆ ನಡೆಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ’ ಎಂದು ಹೇಳಿದರು.

ADVERTISEMENT

‘ಟ್ರೈನಿ ನೌಕರರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲ. ಕೆಲಸಕ್ಕೆ ಸೇರಿದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಅಥವಾ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುವ ಹಾಗಿಲ್ಲ. ಸಾರ್ವಜನಿಕರಿಗೆ ತೊಂದರೆ ಮಾಡಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ನ್ಯಾಯಾಲಯವೂ ಹೇಳಿದೆ. ಹೀಗಾಗಿ ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕು’ ಎಂದರು.

‘ದುರಹಂಕಾರ ಬಿಡಿ, ಮಾತುಕತೆ ನಡೆಸಿ’

ಬೀದರ್: ‘ವೇತನ ಕಡಿಮೆ ಇದ್ದ ಕಾರಣಕ್ಕೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೇ ಅನಾನುಕೂಲವಾಗಿ ಸಾರಿಗೆ ನೌಕರರು ಸಾಲ ಮಾಡಿಕೊಂಡಿದ್ದಾರೆ. ಅವರಿಗೆ ಸರಿಯಾದ ವೇತನ ಕೊಟ್ಟಿದ್ದರೆ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದರು’ ಎಂದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಲಘುವಾಗಿ ಮಾತನಾಡುತ್ತಿರುವ ಸಚಿವರಿಂದಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರಹಂಕಾರದ ಮಾತು ಬಿಟ್ಟು ಕಾರ್ಮಿಕ ಸಂಘಟನೆಗಳನ್ನು ಕರೆಸಿ ಮಾತುಕತೆ ನಡೆಸಬೇಕು’ ಎಂದು ಬಸವಕಲ್ಯಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.