ADVERTISEMENT

ರಾಜ್ಯಪಾಲರ ಅವಮಾನಿಸಿದ ಶಾಸಕರ ಅಮಾನತಿಗೆ ಖೂಬಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 12:59 IST
Last Updated 22 ಜನವರಿ 2026, 12:59 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ‌‌ ರಾಜ್ಯಪಾಲರು ಅವರ ಭಾಷಣ ಮುಗಿಸಿ ತೆರಳುವಾಗ ಕಾಂಗ್ರೆಸ್‌ ಪಕ್ಷದ ಶಾಸಕರುಗಳು ಅವರನ್ನು ಅವಮಾನಿಸಿರುವುದು ಖಂಡನಾರ್ಹವಾಗಿದ್ದು, ಕೂಡಲೇ ಅವರನ್ನು ಅಧಿವೇಶನ ಮುಗಿಯುವ ತನಕ ಅಮಾನತಿನಲ್ಲಿ ಇರಿಸಬೇಕೆಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರು ಸಂವಿಧಾನದ ಆರ್ಟಿಕಲ್‌ಗಳನ್ನು ಉಲ್ಲೇಖಿಸಿ, ರಾಜ್ಯಪಾಲರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿರುವುದು, ಒಬ್ಬ ಮುಖ್ಯಮಂತ್ರಿಯಾಗಿ ಅವರ ಈ ನಡೆ ಅವರಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್‌ ಪಕ್ಷ, ಅದರ ಮಿತ್ರ ಪಕ್ಷಗಳು ಮತ್ತು ರಾಜ್ಯದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರ ಸಾಂವಿಧಾನಿಕ ಹುದ್ದೆ ಮೇಲೆ ಇರುವ ರಾಜ್ಯಪಾಲರುಗಳನ್ನು ದೇಶದೆಲ್ಲೆಡೆ ಸರಿಯಾಗಿ ನಡೆಸಿಕೊಳ್ಳದೆ ಅವಮಾನಿಸುವ ಕೆಲಸ ಮಾಡುತ್ತಿದ್ದು, ಇದು ಖಂಡನಾರ್ಹ ಎಂದು ಗುರುವಾರ ತಿಳಿಸಿದ್ದಾರೆ.

ರಾಜ್ಯಪಾಲರಿಗೂ ಗೊತ್ತಿದೆ, ಯಾವ ಯೋಜನೆ ಎಷ್ಟು ಪರಿಣಾಮಕಾರಿ, ಎಷ್ಟು ಭೃಷ್ಟ ಯೋಜನೆ ಎಂಬುದು. ಆದಕಾರಣ ರಾಜ್ಯಪಾಲರು, ರಾಜ್ಯದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಎಷ್ಟು ಭಾಷಣ ಮಾಡಬೇಕೊ ಅಷ್ಟೇ ಮಾಡಿದ್ದಾರೆ. ರಾಜಕಾರಣ ಮಾಡುವ ಉದ್ದೇಶ ಮತ್ತು ಭೃಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯನವರ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷ ವಿಬಿ-ಜಿ ರಾಮ್‌ಜೀ ಯೋಜನೆಗೆ ವಿರೋಧ ಮಾಡುತ್ತಿದೆ. ಒಳ್ಳೆಯ ಯೋಜನೆ ಬಗ್ಗೆ ರಾಜ್ಯಪಾಲರಿಂದ ತಪ್ಪಾಗಿ ಹೇಳಿಸುವ ಯತ್ನ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಸಂವಿಧಾನದ ದುರುಪಯೋಗ ಪಡಿಸಿಕೊಂಡು, ಮನಸ್ಸಿಗೆ ಬಂದಿದ್ದೆಲ್ಲ ಭಾಷಣ ಮಾಡಲು ಕೊಟ್ಟರೆ ರಾಜ್ಯಪಾಲರು ಯಾಕೆ ಆ ಭಾಷಣ ಮಾಡುತ್ತಾರೆ ಎಂದು ಖೂಬಾ ಪ್ರಶ್ನಿಸಿದ್ದಾರೆ.

ADVERTISEMENT

ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುವ ಮುನ್ನ ಒಂದು ಸಲ ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ರೈತರಿಗೆ, ಮಹಿಳೆಯರಿಗೆ, ಸರ್ಕಾರಿ ನೌಕರರಿಗೆ, ಬಡವರು ಸೇರಿದಂತೆ ಯಾರಿಗೂ ರಕ್ಷಣೆಯಿಲ್ಲ. ಸರ್ಕಾರದಿಂದ ಒಳ್ಳೆಯದಾಗುತ್ತಿಲ್ಲ. ಜನ ಈ ಸರ್ಕಾರಕ್ಕೆ ಶಾಪ್ ಹಾಕುತ್ತಿದ್ದಾರೆ. ಇದೆಲ್ಲಾ ಬಿಟ್ಟು ಮೋದಿಯವರ ಮೇಲೆ, ಕೇಂದ್ರ ಸರ್ಕಾರದ ವಿರುದ್ದ ಮುಗಿಬೀಳುವುದೇ ಸಿದ್ದರಾಮಯ್ಯನವರು ಕಾಯಕ ಮಾಡಿಕೊಂಡಿದ್ದಾರೆ ಎಂದು ‌ರಿಹಾಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.