ಶಹಾಪುರ (ಯಾದಗಿರಿ ಜಿಲ್ಲೆ): ಗ್ರಾಮಸಭೆಗೆ ತೆರಳುತ್ತಿದ್ದ ಪಿಡಿಒ ಅವರ ಮೇಲೆ ಗ್ರಾ.ಪಂ. ಸದಸ್ಯೆ ಹಾಗೂ ಇನ್ನೊಬ್ಬರು ಕೂಡಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಚಪ್ಪಲಿಯಿಂದ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಶನಿವಾರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೋರನಹಳ್ಳಿ ಗ್ರಾ.ಪಂ. ಪಿಡಿಒ ದೇವರಾಜ ರಂಗಪ್ಪ ಚಲುವಾದಿ ಹಲ್ಲೆಗೆ ಒಳಗಾದವರು. ಗ್ರಾ.ಪಂ ಸದಸ್ಯೆ ತಾಯಮ್ಮ ಶ್ರೀಕಾಂತ ತೆಗನೂರ ಹಾಗೂ ಆಕೆಯ ತಮ್ಮ ಮಂಜುನಾಥ ಬಸಪ್ಪ ಅನ್ವರ ಹಲ್ಲೆ ಮಾಡಿದವರು.
ಮನೆ ಹಂಚಿಕೆ ಬಗ್ಗೆ ಗ್ರಾಮಸಭೆ ಇರುವ ಕಾರಣ ಶನಿವಾರ ಪಿಡಿಒ ಹಾಗೂ ಪಂಪ್ ಅಪರೇಟರ್ ಭೀಮರಾಯ ಕಂಬಾರ ಅವರೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಅದೇ ಸಮಯಕ್ಕೆ ಗ್ರಾ.ಪಂ ಸದಸ್ಯೆ ತಾಯಮ್ಮ ಹಾಗೂ ಮಂಜುನಾಥ ಬಂದಿದ್ದಾರೆ. ತಾಯಮ್ಮ ಕಣ್ಣಿಗೆ ಖಾರದ ಪುಡಿ ಎರಚಿ, ಚಪ್ಪಲಿ ತೆಗೆದುಕೊಂಡು ಮುಖಕ್ಕೆ ಬೆನ್ನಿಗೆ ಹೊಡೆದು ಗಾಯಗೊಳಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪಿಡಿಒ ದೂರಿನಲ್ಲಿ ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಪಿಡಿಒ ದೇವರಾಜ ಹಾಗೂ ಇತರ ಏಳು ಜನ ಸೇರಿಕೊಂಡು ತಮಗೆ ಜಾತಿನಿಂದನೆ ಹಾಗೂ ಅಪಮಾನ ಮಾಡಿದ್ದಾರೆ ಎಂದು ಗ್ರಾ.ಪಂ. ಸದಸ್ಯೆ ತಾಯಮ್ಮ ತೆಗನೂರ ಶಹಾಪುರ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ, ಆರಿಫ್ ಮಠ, ಮಹಾಂತಗೌಡ ನಂದಿಕೋಲ, ವಿಜಯಕುಮಾರ ಮಲಗೊಂಡ, ಸಿದ್ದಣ್ಣ ದೇಸಾಯಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.