ADVERTISEMENT

ರಾಮತೀರ್ಥವಾಡಿ: ಗ್ರಾಮಕ್ಕೆ ಬಾರದ ಬಸ್‌ ವಿದ್ಯಾರ್ಥಿಗಳಿಗೆ ತೊಂದರೆ

ಸೌಕರ್ಯಗಳ ಕೊರತೆಯಿಂದ ನಿವಾಸಿಗಳು ತತ್ತರ

ಬಸವರಾಜ ಎಸ್.ಪ್ರಭಾ
Published 18 ಫೆಬ್ರುವರಿ 2020, 10:31 IST
Last Updated 18 ಫೆಬ್ರುವರಿ 2020, 10:31 IST
ಗ್ರಾಮದ ಸಮೀಪದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ
ಗ್ರಾಮದ ಸಮೀಪದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ   

ಭಾಲ್ಕಿ: ಗ್ರಾಮಕ್ಕೆ ಸುಮಾರು ವರ್ಷಗಳಿಂದ ಸರ್ಕಾರಿ ಬಸ್ ಬರುತ್ತಿಲ್ಲ. ಹಾಗಾಗಿ, ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಆಗದಿರುವುದರಿಂದ ತಗಡಿನ ಮೇಲ್ಛಾವಣಿಯ ಕೋಣೆಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕಾಗಿದೆ. ಸರ್ಕಾರಿ ಶಾಲೆ ಕಾಂಪೌಂಡ್‌ಗೆ ಗೇಟ್ ಇಲ್ಲದಿರುವುದರಿಂದ ಶಾಲೆ ಆವರಣ ದನ, ನಾಯಿಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತಿದೆ.

ಇದು ತಾಲ್ಲೂಕು ಕೇಂದ್ರದಿಂದ 2.5 ಕಿ.ಮೀ ದೂರದಲ್ಲಿರುವ ರಾಮತೀರ್ಥವಾಡಿ ಗ್ರಾಮದ ಚಿತ್ರಣ. ಈ ಗ್ರಾಮ ದಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಅಗತ್ಯ ಮೂಲಸೌಕರ್ಯ ಕೊರತೆ ಜನರನ್ನು ಚಿಂತೆಗೀಡುಮಾಡಿದೆ. ಗ್ರಾಮದ ಬಹುತೇಕ ಕಡೆಗಳಲ್ಲಿ ಹೊಲಸು ನೀರು ಹರಿದು ಹೋಗಲು ಚರಂಡಿ ಇಲ್ಲದಿರುವುದರಿಂದ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮನೆಗಳ ಅಕ್ಕಪಕ್ಕ ತಿಪ್ಪೆಗುಂಡಿಗಳು ಇವೆ. ಇನ್ನು, ಮಕ್ಕಳು, ಮಹಿಳೆಯರಾದಿಯಾಗಿ ಊರ ಸಮೀಪದ ರಸ್ತೆ ಅಕ್ಕಪಕ್ಕ ಬಯಲು ಶೌಚ ಮಾಡುವುದರಿಂದ ಸುತ್ತಲಿನ ಮನೆಗಳ ಜನರು ಸಾಂಕ್ರಾಮಿಕ ರೋಗಗಳ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಊರಿನ ಮುಖ್ಯರಸ್ತೆ ಸಮೀಪದ ರಸ್ತೆ ತುಂಬಾ ವರ್ಷಗಳ ಹಿಂದೆ ಮಾಡಿರುವುದರಿಂದ ಹಾಳಾಗಿದೆ.

ADVERTISEMENT

ಗ್ರಾಮದ ಸಮೀಪದ ಹೊಲಗಳಿಗೆ ತೆರಳುವ ಹಣದಿ ರಸ್ತೆ ಕಚ್ಚಾ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಹೊಲಗಳಿಗೆ ತೆರಳಲು, ಇನ್ನು ರಾಶಿ ಸಮಯದಲ್ಲಿ ಬೆಳೆಗಳನ್ನು ಮನೆಗೆ ತರಲು ತುಂಬಾ ಸಮಸ್ಯೆ ಆಗುತ್ತಿದೆ. ಮನೆ, ಮಳೆ ನೀರು ಹರಿದು ಹೋಗಲು ಎಲ್ಲೆಡೆ ಚರಂಡಿಗಳಿಲ್ಲ. ಕೆಲವೆಡೆ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಚರಂಡಿ ನಿರ್ಮಿಸಿದ್ದಾರೆ.

ಇದರಿಂದ ಚರಂಡಿ ನೀರು ಮನೆ, ರಸ್ತೆ ಮಧ್ಯೆ ಸಂಗ್ರಹವಾಗುತ್ತಿದೆ. ಹಾಗಾಗಿ, ಸೊಳ್ಳೆಗಳ ಕಾಟ ವೀಪರಿತವಾಗಿದ್ದು, ಡೆಂಗಿ, ಕಾಲರಾ ಸೇರಿದಂತೆ ಇತರ ರೋಗಗಳ ಭೀತಿ ನಮ್ಮನ್ನು ಆವರಿಸಿದೆ ಎಂದು ಗ್ರಾಮಸ್ಥರಾದ ಹುಲೆಪ್ಪಾ ಮಂಜುಳೆ, ಲಕ್ಷ್ಮಿ, ಪಾಂಡುರಂಗ, ತಾನಾಜಿ ಪಾಪಡವಾಲೆ ತಮ್ಮ ಅಳಲು ತೋಡಿಕೊಂಡರು.

ಎಲ್ಲ ಸಮಸ್ಯೆಗಳು ಪಂಚಾಯಿತಿ ಅಧಿಕಾರಿ, ಜನ ಪ್ರತಿನಿಧಿಗಳ ಗಮನಕ್ಕಿದ್ದರೂ ಎಲ್ಲೆಡೆ ರಸ್ತೆ, ಚರಂಡಿ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಕನಿಷ್ಠಪಕ್ಷ ಹೊಲಸು ಇರುವ ಕಡೆಗಳಲ್ಲಿ ಆಗಾಗ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲು ಮುಂದಾಗುತ್ತಿಲ್ಲ ಎಂದು ಜನರು ಆರೋಪಿಸುತ್ತಾರೆ.

ಗ್ರಾಮದ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟವರು ಆದಷ್ಟು ಶೀಘ್ರ ಪರಿಹರಿಸಿ ಸುಗಮ ಜೀವನ ನಡೆಸಲು ಸಹಕರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.