
ಬೀದರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಸಂತ ಸೇವಾಲಾಲರ 287ನೇ ಜಯಂತಿಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರ ವಿಚಾರಧಾರೆಗಳು ಯುವ ಪೀಳಿಗೆಗೆ ದಿಕ್ಕು ತೋರಿಸುವ ದೀಪವಾಗಿದೆ. ಅನ್ಯಾಯ–ಅಂಧ ಶ್ರದ್ಧೆಗಳ ವಿರುದ್ಧ ಹೋರಾಡಿ ಸಮಾನತೆ, ಶಿಕ್ಷಣ ಹಾಗೂ ಆತ್ಮಗೌರವದ ಸಂದೇಶ ನೀಡಿದ ಸಂತ ಸೇವಾಲಾಲ್ ಮಹಾರಾಜರ ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದರು.
ಸಂತ ಸೇವಾಲಾಲ್ ಮಹಾರಾಜರು ಮಹಾನ್ ಪವಾಡ ಪುರುಷರಾಗಿದ್ದರು. ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಮೂಢನಂಬಿಕೆ, ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಿಗೆ ತಿಳಿವಳಿಕೆ ಮೂಡಿಸಿದರು. ಸಮಾಜದ ಐಕ್ಯತೆ ಮತ್ತು ಸಹಬಾಳ್ವೆಗೆ ಪ್ರೇರೇಪಿಸಿದರು. ಬ್ರಿಟಿಷರು ತೆರಿಗೆ ಹೆಚ್ಚಳ ಮಾಡಿದಾಗ ವೀರ ಸೇನಾನಿಯಾಗಿ ಹೋರಾಡಿದರು. ಯಾವುದೇ ಮಹಾನ್ ಪುರುಷರು ಒಂದೇ ಜಾತಿಗೆ ಸೀಮಿತವಿಲ್ಲ. ಅವರು ಮಾನವ ಕುಲಕ್ಕೆ ಸುಧಾರಣೆಗೆ ಪ್ರಯತ್ನಿಸಿದವರು ಎಂದು ತಿಳಿಸಿದರು.
ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಗೋವರ್ಧನ್ ರಾಠೋಡ್, ಮುಖಂಡರಾದ ಬಸವರಾಜ ಪವಾರ್, ಮಾಣಿಕರಾವ್ ಪವಾರ್, ವೀರಶೆಟ್ಟಿ ರಾಠೋಡ್, ಗೋಪಾಲಸಿಂಗ್ ರಾಠೋಡ್, ಕಿಶನರಾವ್ ರಾಠೋಡ್ ಮತ್ತಿತರರು ಇದ್ದರು.
ನಗರದ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಪೌರಾಡಳಿತ ಸಚಿವ ರಹೀಂ ಖಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಸಂತ ಸೇವಾಲಾಲ್ ಮಹಾರಾಜರು ಇಡೀ ಸಮಾಜಕ್ಕೆ ಒಳಿತನ್ನು ಬಯಸಿ ಶಾಂತಿಯ ಸಂದೇಶ ಸಾರಿದವರು. ಅವರು ಮಾನವ ಕುಲಕ್ಕೆ ಸುಧಾರಣೆಗೆ ಪ್ರಯತ್ನಿಸಿದವರು ಎಂದರು. ಸಂತ ಸೇವಾಲಾಲರಂತಹ ದಾರ್ಶನಿಕರು ಒಂದು ಜಾತಿಗೆ ಸೀಮಿತರಲ್ಲ. ಅವರು ಬಂಜಾರ ಸಮಾಜ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಬಹಳಷ್ಟು ಉತ್ತಮ ಸಂದೇಶ ನೀಡಿದ್ದಾರೆ. ಇವರ ವಚನ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮರಕಲ್ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಬಳವಂತರಾವ್ ರಾಠೋಡ್ ಅವರು ಸಂತ ಸೇವಾಲಾಲ್ ಮಹಾರಾಜರ ಕುರಿತು ಅತಿಥಿ ಉಪನ್ಯಾಸ ನೀಡಿದರು.ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಮಾರ್ಗಗಳಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು. ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.