ADVERTISEMENT

ಮೆರವಣಿಗೆಗೆ ಹರಿದು ಬಂದ ಭಕ್ತ ಸಾಗರ

ಬೀದರ್‌ನಲ್ಲಿ ಗುರುನಾನಕ್‌ ದೇವ ಜಯಂತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 12:49 IST
Last Updated 8 ನವೆಂಬರ್ 2022, 12:49 IST
ಗುರುನಾನಕ್‌ರ 553ನೇ ಜಯಂತಿ ಅಂಗವಾಗಿ ಸಿಖ್‌ರು ಬೀದರ್‌ನಲ್ಲಿ ಮಂಗಳವಾರ ಧಾರ್ಮಿಕ ಧ್ವಜ ಹಾಗೂ ಶಸ್ತ್ರಗಳೊಂದಿಗೆ ಮೆರವಣಿಗೆ ನಡೆಸಿದರು / ಚಿತ್ರ: ತಾಜುದ್ದೀನ್‌ ಆಜಾದ್
ಗುರುನಾನಕ್‌ರ 553ನೇ ಜಯಂತಿ ಅಂಗವಾಗಿ ಸಿಖ್‌ರು ಬೀದರ್‌ನಲ್ಲಿ ಮಂಗಳವಾರ ಧಾರ್ಮಿಕ ಧ್ವಜ ಹಾಗೂ ಶಸ್ತ್ರಗಳೊಂದಿಗೆ ಮೆರವಣಿಗೆ ನಡೆಸಿದರು / ಚಿತ್ರ: ತಾಜುದ್ದೀನ್‌ ಆಜಾದ್   

ಬೀದರ್: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 553ನೇ ಜಯಂತಿ ಪ್ರಯುಕ್ತ ದೇಶದ ವಿವಿಧೆಡೆಯಿಂದನಗರಕ್ಕೆ ಬಂದಿದ್ದ ಸಿಖ್‌ ಸಮುದಾಯದ ಸಾವಿರಾರು ಭಕ್ತರು ನಗರದಲ್ಲಿ ಮಂಗಳವಾರ ಅದ್ಧೂರಿ ಮೆರವಣಿಗೆ ನಡೆಸಿದರು.


ಗುರುದ್ವಾರದಲ್ಲಿ ಬೆಳಿಗ್ಗೆ ಕೀರ್ತನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು. ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಗುರು ಗ್ರಂಥ ಸಾಹಿಬ್ ದರ್ಶನ ಪಡೆದರು. ಅನೇಕ ದಾನಿಗಳು ಆವರಣದಲ್ಲಿ ಸಕಲ ಭಕ್ತರಿಗೆ ಉಪಾಹಾರ, ಪಾನೀಯ ಹಾಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು. ಲಂಗರ್‌ನಲ್ಲಿ ದಿನವಿಡೀ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.

ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ ಹಾಗೂ ತೆಲಂಗಾಣದ ಗುರುದ್ವಾರಗಳ ಪ್ರಮುಖರು ಗುರುದ್ವಾರದ ಆವರಣದಲ್ಲಿ ಸಂಜೆ ಗುರುಗ್ರಂಥ ಸಾಹಿಬ್‌ ಹಾಗೂ ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ಗುರುದ್ವಾರ ಶ್ರೀನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಸದಸ್ಯ ಮನ್‌ಪ್ರೀತ್‌ಸಿಂಗ್, ಜಸ್ಪ್ರೀತ್‌ಸಿಂಗ್ ಮೊದಲಾದ ಸಿಖ್‌ ಮುಖಂಡರು ಮೆರವಣಿಗೆಯಲ್ಲಿದ್ದರು. ಸಿಖ್‌ರು ಧಾರ್ಮಿಕ ಧ್ವಜಗಳು ಹಾಗೂ ನಿಶಾನ್‌ ಸಾಹಿಬ್‌ ಹಿಡಿದು ಜಯಘೋಷ ಮೊಳಗಿಸಿದರು.

ಅನೇಕ ಯುವಕರು ಕೈಯಲ್ಲಿ ಖಡ್ಗ ಹಿಡಿದು ಗುರುದ್ವಾರ ಆವರಣದಿಂದ ಉದಗಿರ ರಸ್ತೆಯ ಪ್ರವೇಶ ಮಂಟಪದ ವರೆಗೂ ಅವೇಶ ಭರಿತರಾಗಿ ಓಡಿದರು. ಕುದುರೆಯ ಮೇಲೆ ಕುಳಿತ ಸವಾರ ನಗಾರಿ ಬಾರಿಸುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹುರಿದುಂಬಿಸಿದರು. ಯುವಕರು ಕತ್ತಿ ವರಸೆ, ಲಾಠಿ, ಬೆಂಕಿ ಚಕ್ರ ಪ್ರದರ್ಶನ ನೀಡಿದರು. ಮೆರವಣಿಗೆ ನಗರದ ಅಂಬೇಡ್ಕರ್‌ ವೃತ್ತದ ವರೆಗೆ ಹೋಗಿ ಮತ್ತೆ ಗುರುದ್ವಾರಕ್ಕೆ ಬಂದು ಸಮಾರೋಪಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.