
ಬೀದರ್: ನಗರದ ಗುರುದ್ವಾರದಲ್ಲಿ ಈಗ ಹಬ್ಬದ ಸಡಗರ ಮನೆ ಮಾಡಿದೆ. ಗುರುನಾನಕ ಝೀರಾ ಪರಿಸರದಲ್ಲಿ ಎಲ್ಲೆಲ್ಲೂ ಭಕ್ತರ ಓಡಾಟ, ಗುರು ಗ್ರಂಥ ಸಾಹೀಬ್ ಪಠಣ, ನಿರಂತರ ಅನ್ನದಾಸೋಹ, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಗುರುದ್ವಾರ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.
ಪ್ರತಿ ವರ್ಷ ಗೌರಿ ಹುಣ್ಣಿಮೆಯಂದು ಸಿಖ್ ಧರ್ಮ ಸಂಸ್ಥಾಪಕ ಗುರುನಾನಕರ ಜಯಂತಿ ಆಚರಿಸಲಾಗುತ್ತದೆ. ಬುಧವಾರ(ನ.5) ಹುಣ್ಣಿಮೆಯ ದಿನ ಜಯಂತಿ ಆಚರಿಸಲಾಗುತ್ತಿದ್ದು, ಇದಕ್ಕಾಗಿ ಗುರುದ್ವಾರದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಝೀರಾ ಪರಿಸರದಲ್ಲಿ ಸಿಖ್ ಧರ್ಮ ಧ್ವಜಗಳು ರಾರಾಜಿಸುತ್ತಿವೆ. ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ತಳಿರು ತೋರಣ ಹಾಗೂ ಹೂಗಳಿಂದ ಸಿಂಗರಿಸಲಾಗಿದೆ. ವಿವಿಧ ಕಡೆಗಳಿಂದ ಭಕ್ತಗಣ ಹರಿದು ಬಂದಿದೆ.
ವರ್ಷದಲ್ಲಿ ಎರಡು ದಿನ ಮಾತ್ರ ಗುರುದ್ವಾರದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಹೋಳಿ ಹಬ್ಬ ಹಾಗೂ ಗೌರಿ ಹುಣ್ಣಿಮೆಯ ದಿನ ಬರುವ ಗುರುನಾನಕರ ಜಯಂತಿಯಂದು. ಪ್ರತಿವರ್ಷ ಗುರುದ್ವಾರ ಪ್ರಬಂಧಕ ಕಮಿಟಿ ಅತ್ಯಂತ ಸಡಗರ, ಸಂಭ್ರಮದಿಂದ ಜಯಂತಿ ಆಚರಿಸುತ್ತದೆ. ಈ ಸಲವೂ ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ವಿವಿಧ ಕಡೆಗಳಿಂದ ಬರುವ ಭಕ್ತರ ವಾಸ್ತವ್ಯ ಸೇರಿದಂತೆ ಇತರೆ ವ್ಯವಸ್ಥೆ ಮಾಡಿದೆ. ಗುರುದ್ವಾರ ನಾನಕ್ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಸದಸ್ಯರಾದ ಮನಪ್ರೀತ್ ಸಿಂಗ್, ಜಸ್ಪ್ರೀತ್ ಸಿಂಗ್ ಸೇರಿದಂತೆ ಹಲವರು ಮಂಗಳವಾರ ಸಿದ್ಧತೆ ಪರಿಶೀಲಿಸಿದರು.
ಸಿಖ್ ಧರ್ಮೀಯರ ಪವಿತ್ರ ಕ್ಷೇತ್ರಗಳಲ್ಲಿ ಬೀದರ್ ಗುರುದ್ವಾರ ಕೂಡ ಒಂದು. ಸಿಖ್ ಧರ್ಮೀಯರು ಅವರ ಜೀವಮಾನದಲ್ಲಿ ಅವರ ಧರ್ಮಕ್ಕೆ ಸೇರಿದ ಧಾರ್ಮಿಕ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ಕೊಡಬೇಕೆಂಬ ನಂಬಿಕೆಯಿದೆ. ಆ ನಂಬಿಕೆಯಲ್ಲಿ ಬೀದರ್ ಗುರುದ್ವಾರಕ್ಕೂ ಸ್ಥಾನವಿದೆ. ಹೀಗಾಗಿಯೇ ವರ್ಷವಿಡೀ ದೇಶದ ವಿವಿಧ ಭಾಗಗಳಿಂದ ಸಿಖ್‌ರು ಇಲ್ಲಿಗೆ ಬಂದು ಹೋಗುತ್ತಾರೆ.
ಗುರುನಾನಕರ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ತಯಾರಿ ಮಾಡಲಾಗಿದೆಸರ್ದಾರ್ ಬಲಬೀರ್ ಸಿಂಗ್ ಅಧ್ಯಕ್ಷ ಗುರುದ್ವಾರ ನಾನಕ್ ಝೀರಾ ಪ್ರಬಂಧಕ ಕಮಿಟಿ
ಇಂದು ಏನಿರಲಿದೆ?
ಬುಧವಾರ(ನ.5) ಬೆಳಿಗ್ಗೆ ಸಿಖ್ ಧರ್ಮ ಗ್ರಂಥ ‘ಗುರುಗ್ರಂಥ ಸಾಹಿಬ್’ ಪಠಣದೊಂದಿಗೆ ಧಾರ್ಮಿಕ ಕೈಂಕರ್ಯಗಳು ಬೀದರ್ ಗುರುದ್ವಾರದಲ್ಲಿ ಆರಂಭಗೊಳ್ಳುತ್ತವೆ. ಬಳಿಕ ಪ್ರವಚನ ನಡೆಯುತ್ತದೆ. ಸಂಜೆ ಅಲಂಕರಿಸಿದ ವಾಹನದಲ್ಲಿ ಧರ್ಮ ಗ್ರಂಥದ ಮೆರವಣಿಗೆ ಜರುಗುತ್ತದೆ. ಮೆರವಣಿಗೆಗೂ ಮುನ್ನ ಸಿಖ್ ಯುವಕರು ಖಡ್ಗ ಹಿಡಿದು ಗುರುದ್ವಾರ ಗೇಟ್ ವರೆಗೆ ಓಡುತ್ತ ಬರುವುದು ವಿಶೇಷ. ಅಲ್ಲಿಂದ ಮಡಿವಾಳೇಶ್ವರ ವೃತ್ತ ನೆಹರೂ ಕ್ರೀಡಾಂಗಣ ಡಾ.ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಜರುಗುತ್ತದೆ. ಮಾರ್ಗದುದ್ದಕ್ಕೂ ‘ಜೋ ಬೋಲೇ ಸೋ ನಿಹಾಲ್’ ‘ವಾಹೆ ಗುರು ಕಾ ಖಾಲ್ಸಾ’ ‘ವಾಹೆ ಗುರು ಕಾ ಫತೇಹ್’ ‘ಸತ್‌ಶ್ರೀ ಅಕಾಲ್’ ಎಂಬ ಘೋಷಣೆಗಳನ್ನು ಕೂಗುತ್ತಾರೆ.
ಭಕ್ತರಿಗೆ ‘ಲಂಗರ್’
ಗುರುದ್ವಾರದ ಪರಿಸರದಲ್ಲಿರುವ ‘ಲಂಗರ್’ (ದಾಸೋಹ ಮನೆ) ಸಾಮಾನ್ಯ ದಿನಗಳಲ್ಲೂ ಹಗಲು ರಾತ್ರಿ ನಡೆಯುತ್ತದೆ. ಜಾತಿ ಮತ ಪಂಥದ ಭೇದವಿಲ್ಲದೇ ಯಾರೇ ಬಂದರೂ ಉಣಬಡಿಸುತ್ತಾರೆ. ಗುರುನಾನಕರ ಜಯಂತಿ ಸಂದರ್ಭದಲ್ಲಿ ವಿಶೇಷವಾಗಿ ಹಲವು ಬಗೆಯ ಖಾದ್ಯಗಳನ್ನು ಮಾಡಿ ಬಡಿಸುತ್ತಾರೆ. ಸಿಖ್ ಧರ್ಮೀಯರೊಂದಿಗೆ ಅನ್ಯ ಧರ್ಮೀಯರು ಸಹ ಗುರುದ್ವಾರಕ್ಕೆ ಭೇಟಿ ಕೊಟ್ಟು ದರ್ಶನ ಪಡೆದು. ಲಂಗರ್‌ನಲ್ಲಿ ಪ್ರಸಾದ ಸವಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.