ADVERTISEMENT

ಬೀದರ್‌: ವಿವಿಧೆಡೆ ಸಂಭ್ರಮದ ಗುರು ಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:37 IST
Last Updated 11 ಜುಲೈ 2025, 6:37 IST
ಗುರು ಪೂರ್ಣಿಮೆ ಅಂಗವಾಗಿ ಬೀದರ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಿದ್ದಾರೂಢ ಮಠದ ಶಿವಕುಮಾರ ಸ್ವಾಮೀಜಿ ಅವರ ಪೂಜೆ ನೆರವೇರಿಸಲಾಯಿತು
ಗುರು ಪೂರ್ಣಿಮೆ ಅಂಗವಾಗಿ ಬೀದರ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಿದ್ದಾರೂಢ ಮಠದ ಶಿವಕುಮಾರ ಸ್ವಾಮೀಜಿ ಅವರ ಪೂಜೆ ನೆರವೇರಿಸಲಾಯಿತು   

ಬೀದರ್‌: ನಗರದ ಹಲವೆಡೆ ಗುರುವಾರ ಗುರು ಪೂರ್ಣಿಮೆಯನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಸಿದ್ದಾರೂಢ ಮಠ:

ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತರು ನಾಣ್ಯಗಳಿಂದ ತುಲಾಭಾರ ಮಾಡಿದರು. 

ADVERTISEMENT

ಮಠದ ಸಾಧಕ-ಸಾಧಕಿಯರು ಷೋಡಷೋಪಚಾರ ಮೂಲಕ ಸ್ವಾಮೀಜಿ ಪಾದಪೂಜೆ ಮಾಡಿದರು. ಸ್ವಾಮೀಜಿ ಮಾತನಾಡಿ, ಜೀವನದ ಸಾರ್ಥಕತೆಗೆ ಪ್ರತಿಯೊಬ್ಬರೂ ಸದ್ಗುರುವಿನ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಬೇಕು ಎಂದರು.

ಕಲಬುರಗಿಯ ಮಾತೆ ಲಕ್ಷ್ಮಿದೇವಿ, ಗುರುದೇವಾಶ್ರಮದ ಗಣೇಶಾನಂದ ಮಹಾರಾಜ್,
ನಾಸಿಕದ ಮಾತೆ ಮನಿಶಾ, ನಾಗಪುರದ ಮಾತೆ ಶೋಭನಾ, ಮುಳಸಾವಳಗಿ ದಯಾನಂದ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ, ಸೋಲಾಪುರದ ಜಡಿಸಿದ್ದ ಸ್ವಾಮೀಜಿ, ಚಳಕಾಪುರದ ಶಿವಪ್ರಕಾಶನಂದಗಿರಿ ಸ್ವಾಮೀಜಿ, ಸ್ವಾತ್ಮಾನಂದ ಗಿರಿ ಸ್ವಾಮೀಜಿ, ಮಾತೆ ಸಿದ್ದೇಶ್ವರಿ, ಮಾತೆ ಸಂಗೀತಾ, ಬೆಳ್ಳೂರಿನ ಅಮೃತಾನಂದಮಯಿ, ಮಾತೆ ಶ್ರೀದೇವಿ ಮತ್ತಿತರರು ಇದ್ದರು.

ವಿದ್ಯಾರಣ್ಯ ಪ್ರೌಢ ಶಾಲೆ: 

ಕಾರ್ಯಕ್ರಮದಲ್ಲಿ ಕರ್ನಾಟಕ ಕಾಲೇಜಿನ ಸಹ ಪ್ರಾಧ್ಯಾಪಕ ರವಿಚಂದ್ರ ಬರದಾಪೂರೆ ಮಾತನಾಡಿ, ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ, ಆಷಾಢಪೂರ್ಣಿಮೆ ಎಂತಲು ಕರೆಯುವರು. ವ್ಯಾಸ ಮಹರ್ಷಿಯರು ವೇದಗಳನ್ನು ವಿಂಗಡಿಸಿ ವೇದವ್ಯಾಸರೆನಿಸಿಕೊಂಡರು. ಪಶುತ್ವದಿಂದ ಮನುಷ್ಯತ್ವದ ಕಡೆಗೆ ಒಯ್ಯುವನೇ ಗುರು. ದೇವರಿಗೆ ಸಮಾನ ಆಗಿರುವವನೇ ಗುರು ಮತ್ತು ನಮಗೆ ಒಳ್ಳೆಯ ಮಾರ್ಗದರ್ಶಕ ಎಂದರು.

ಸಂಸ್ಥೆಯ ಉಪಾಧ್ಯಕ್ಷ ನಾಗೇಶರೆಡ್ಡಿ, ಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಇದ್ದರು. 10ನೇ ತರಗತಿಯ ಕೇದಾರಲಿಂಗ ಸ್ವಾಗತಿಸಿದರೆ, ಭಗಿನಿ ಸಾಹಿತ್ಯ ಮತ್ತು ಐಶ್ವರ್ಯ ಗುರುಗೀತೆಯನ್ನು ಹಾಡಿದರು. ಸಂಜನಾ ವಂದಿಸಿದರೆ, ಚಿನ್ನಾನಿಧಿ ನಿರೂಪಿಸಿದಳು.

ಮಡಿವಾಳೇಶ್ವರ ಶಿಶುಮಂದಿರ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ:

ನಗರದ ಮಂಗಲ್‌ ಪೇಟ್‌ನಲ್ಲಿರುವ ಶಾಲೆಯಲ್ಲಿ ಮನ್ನಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ದತ್ತಾತ್ರೇಯ ತುಪ್ಪದ ಮಾತನಾಡಿ, ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಆಚರಿಸುತ್ತಾರೆ. ಈ ದಿನ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಅಂಧಕಾರ, ಅಜ್ಞಾನ ಕಳೆಯುವವ ಗುರು ಎಂದರು.

ಸಂಸ್ಥೆಯ ಕಾರ್ಯದರ್ಶಿ ಹನುಮಂತರಾವ ಪಾಟೀಲ, ಸಂಸ್ಥೆಯ ಹಿರಿಯ ಸದಸ್ಯ ನಾರಾಯಣರಾವ ಮುಖೇಡ್ಕರ್, ಸಂಸ್ಥೆಯ ಸಹ ಕಾರ್ಯದರ್ಶಿ ಪೀರಪ್ಪ ಔರಾದೆ, ಪ್ರೌಢ ಶಾಲೆಯ ಮುಖ್ಯಶಿಕ್ಷಕ ಶರಣು ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಅರ್ಚನಾ ಶಿರಗೇರಿ ಇದ್ದರು. ವಿದ್ಯಾರ್ಥಿಗಳಾದ ರಂಜನ ಬಸವರಾಜ ಸ್ವಾಗತಿಸಿದರೆ, ಶ್ರದ್ಧಾ ನೀಲಕಂಠ ಭಕ್ತಿಗೀತೆ ಹಾಡಿದಳು. ದಿನೇಶ ಪರಮೇಶ್ವರ ವಂದಿಸಿದರು.

ಮಲ್ಲಯ್ಯಗಿರಿ ಆಶ್ರಮ:

ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿಯಲ್ಲಿ ಗುರು ಪೂರ್ಣಿಮೆ, ಬಸವಲಿಂಗ ಅವಧೂತರ 49ನೇ ಜನ್ಮದಿನಾಚರಣೆ, ತೊಟ್ಟಿಲು ಹಾಗೂ ರುದ್ರಾಕ್ಷಿ ತುಲಾಭಾರ ನಡೆಯಿತು.

ಗುರು ಕೃಪೆಯಿಂದ ಜೀವನದಲ್ಲಿ ಉನ್ನತಿ ಪ್ರಾಪ್ತಿಯಾಗುತ್ತದೆ. ಗುರು ಸದಾಕಾಲ ಶಿಷ್ಯನ ಏಳಿಗೆಯನ್ನೇ ಬಯಸುತ್ತಾನೆ. ಶಿಷ್ಯನ ಸಾಧನೆಗೆ ಹೆಮ್ಮೆ ಪಡುತ್ತಾನೆ ಎಂದು ಅವಧೂತರು ತಿಳಿಸಿದರು. ಬಂಡೆಮ್ಮ ಮೂಲಗೆ, ನೀಲ್ಲಮ್ಮ ವಿ. ಪಾಟೀಲ್ ಮತ್ತಿತರರು ಇದ್ದರು.

ಬೀದರ್‌ನ ಸರಸ್ವತಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಗುರು ಪೂರ್ಣಿಮೆಯಲ್ಲಿ ವಿದ್ಯಾರ್ಥಿಗಳು ಗುರು ಮಂತ್ರ ಹೇಳಿದರು
ಕಾರ್ಯಕ್ರಮದಲ್ಲಿ ಬಸವಲಿಂಗ ಅವಧೂತರು ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.