ADVERTISEMENT

ಹಲವು ಸಮಸ್ಯೆಗಳ ಸುಳಿಯಲ್ಲಿ ಹಾಲಹಿಪ್ಪರ್ಗಾ

ರಸ್ತೆ ಮೇಲೆ ಹರಿಯುವ ಚರಂಡಿ ನೀರು; ಪೂರ್ಣವಾಗದ ಅಂಗನವಾಡಿ ಕಟ್ಟಡ

ಬಸವರಾಜ ಎಸ್.ಪ್ರಭಾ
Published 24 ಫೆಬ್ರುವರಿ 2021, 4:11 IST
Last Updated 24 ಫೆಬ್ರುವರಿ 2021, 4:11 IST
ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮ ಸಮೀಪದ ತಿರುವಿನಲ್ಲಿರುವ ಸಣ್ಣ ಸೇತುವೆ ರಕ್ಷಣಾ ಗೋಡೆ ಇಲ್ಲದಿರುವುದನ್ನು ತೋರಿಸುತ್ತಿರುವ ಗ್ರಾಮಸ್ಥರು
ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮ ಸಮೀಪದ ತಿರುವಿನಲ್ಲಿರುವ ಸಣ್ಣ ಸೇತುವೆ ರಕ್ಷಣಾ ಗೋಡೆ ಇಲ್ಲದಿರುವುದನ್ನು ತೋರಿಸುತ್ತಿರುವ ಗ್ರಾಮಸ್ಥರು   

ಭಾಲ್ಕಿ: ರಕ್ಷಣಾ ಗೋಡೆ ಇಲ್ಲದ ತಿರುವಿನಲ್ಲಿರುವ ಸೇತುವೆ. ಸುಮಾರು ಎರಡು ವರ್ಷಗಳಾದರೂ ಪೂರ್ಣವಾಗದ ಅಂಗನವಾಡಿ ಕಟ್ಟಡ. ಗೇಟ್‌ ಇಲ್ಲದ ಶಾಲೆ. ಮನೆಗಳ ಹೊಲಸು ನೀರು ಹರಿದು ಹೋಗಲು ಇಲ್ಲದಚರಂಡಿ ವ್ಯವಸ್ಥೆ. ಹಳೆಯ ಸಿಸಿ ರಸ್ತೆಗಳು...

–ಇದು ತಾಲ್ಲೂಕಿನ ಕೋಸಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾಲಹಿಪ್ಪರ್ಗಾ ಗ್ರಾಮದ ಪ್ರಮುಖ ಸಮಸ್ಯೆಗಳು.

ಈ ಗ್ರಾಮವು ಅಂದಾಜು 2700 ಜನಸಂಖ್ಯೆ ಹೊಂದಿದೆ. ಜನರು ಹಲವು ಸಮಸ್ಯೆಗಳ ಸುಳಿಯಲ್ಲಿ ಜೀವನ ಸಾಗಿಸುತ್ತಿದ್ದರೂ ಅಧಿಕಾರಿಗಳು ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ADVERTISEMENT

‘ಮಳೆಗಾಲದಲ್ಲಿ ಸುರಿದ ಭಾರೀ ಮಳೆಗೆ ಗ್ರಾಮ ಹತ್ತಿರದ ತಿರುವಿನಲ್ಲಿರುವ ಸಣ್ಣ ಸೇತುವೆಯ ರಕ್ಷಣಾ ಕಂಬಗಳು ಕೊಚ್ಚಿಕೊಂಡು ಹೋಗಿವೆ. ಇದು ಅಪಾಯಕಾರಿ ತಿರುವು ಆಗಿದ್ದು, ಇಲ್ಲಿಯವರೆಗೆ ನಾಲ್ಕು ದ್ವಿಚಕ್ರ ವಾಹನ ಸವಾರರು ಹಗಲು, ರಾತ್ರಿ ಹೊತ್ತಿನಲ್ಲಿ ಹಳ್ಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಒಂದು ನಾಲ್ಕು ಚಕ್ರದ ವಾಹನ ಕೂಡಾ ಸೇತುವೆ ಕೆಳಗೆ ಬಿದ್ದು, ವಾಹನ ಚಾಲಕ, ಪ್ರಯಾಣಿಕರು ಗಾಯಗೊಂಡಿದ್ದರು. ಇಷ್ಟೆಲ್ಲಾ ಅಪಾಯ ಸಂಭವಿಸುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಎತ್ತರದ ಸೇತುವೆಯ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ’ ಎಂದು ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಉಮಾಕಾಂತ ಪ್ರತಾಪ, ಚಂದ್ರಶೇಖರ ಪಾಟೀಲ, ರಾಜಕುಮಾರ ಬಕ್ಕಾ ಆರೋಪಿಸುತ್ತಾರೆ.

ಊರಿನ ಕೆಲವೆಡೆ ಅನೇಕ ವರ್ಷಗಳ ಹಿಂದೆ ಸಿ.ಸಿ ರಸ್ತೆ ನಿರ್ಮಿಸಲಾಗಿತ್ತು. ಈಗ ಆ ರಸ್ತೆಯೂ ಹಾಳಾಗಿದೆ. ಎಲ್ಲಿಯೂ ಚರಂಡಿ ನಿರ್ಮಿಸದೆ ಇರುವುದರಿಂದ ಮಳೆ, ಮನೆ, ಅಂಗಡಿಗಳ ಹೊಲಸು ನೀರು ರಸ್ತೆ ಮಧ್ಯೆ, ಮನೆ, ಅಂಗಡಿ ಪಕ್ಕ ಸಂಗ್ರಹಗೊಳ್ಳುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ರೋಗಗಳ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ.

‘ಸರ್ಕಾರಿ ಶಾಲೆ ಆವರಣದಲ್ಲಿ ಎರಡು ವರ್ಷಗಳಿಂದ ನಿರ್ಮಿಸುತ್ತಿರುವ ನೂತನ ಅಂಗನವಾಡಿ ಕಟ್ಟಡ ಇನ್ನೂ ಪೂರ್ಣವಾಗದೆ ಇರುವುದರಿಂದ ಅಂಗನವಾಡಿ ಕೇಂದ್ರವನ್ನು ಮನೆಯಲ್ಲಿ ನಡೆಸುವಂತಾಗಿದೆ. ಶಾಲೆಗೆ ಗೇಟ್‌ ಇಲ್ಲದಿರುವುದರಿಂದ ದನ, ನಾಯಿ ಹಾಗೂ ಪುಂಡ, ಪೋಕರಿಗಳಿಂದ ಅನ್ಯ ಚಟುವಟಿಕೆಗಳಿಗೆ ಬಳಕೆ ಆಗುತ್ತಿದೆ’ ಎಂದು ಗ್ರಾಮಸ್ಥರಾದ ಜಗನ್ನಾಥರಾವ್‌ ಬಿರಾದಾರ, ಬಸವರಾಜ ಬಿರಾದಾರ, ಬಾಬುರಾವ್‌ ಮೇತ್ರೆ, ಭೀಮಣ್ಣಾ ಕುಪ್ಪೆ ಕಳವಳ ವ್ಯಕ್ತಪಡಿಸಿದರು.

‘ನಮ್ಮ ಗ್ರಾಮ ಖಾನಾಪೂರ ಅರಣ್ಯ ವಲಯಕ್ಕೆ ಸಮೀಪ ಇರುವುದರಿಂದ ಹೊಲದಲ್ಲಿನ ಬೆಳೆಗಳಿಗೆ ದಿನವಿಡೀ ಜಿಂಕೆ, ಮಂಗಗಳ ಕಾಟ, ರಾತ್ರಿ ಸಮಯದಲ್ಲಿ ಹಂದಿಗಳ ಕಾಟ ವಿಪರೀತವಾಗಿದೆ. ಬೆಳೆಗಳ ರಕ್ಷಣೆಗಾಗಿ ಎಲ್ಲ ಸಮಯಕ್ಕೂ ಹೊಲದಲ್ಲಿಯೇ ಇರಬೇಕು. ಅರಣ್ಯ ಇಲಾಖೆಯವರು ಪ್ರಾಣಿ, ಮಂಗಗಳ ಕಾಟ ತಡೆಯಲು ಕ್ರಮ ಕೈಗೊಂಡು ಅನ್ನದಾತರ ನೆರವಿಗೆ ಧಾವಿಸಬೇಕು’ ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.