ಬೀದರ್: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೆಸರು, ಉದ್ದಿಗೆ ಕುತ್ತು ಬಂದೊದಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.
ಈ ಸಲ ಹೆಸರು ಮತ್ತು ಉದ್ದು ಉತ್ತಮ ರೀತಿಯಲ್ಲಿ ಬೆಳೆದಿದೆ. ರೈತರು ಇನ್ನೇನು ಬೆಳೆ ಕಟಾವು ಮಾಡಿ, ರಾಶಿ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಎಡೆಬಿಡದೆ ಸುರಿಯುತ್ತಿರುವ ಮಳೆ ಅವರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉದ್ದು, ಹೆಸರಿನ ಬೆಳೆ ನಡುವೆ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ. ರೈತರ ಕಣ್ಣೆದುರಲ್ಲೇ ಬೆಳೆ ಮಣ್ಣು ಪಾಲಾಗುತ್ತಿದ್ದರೂ ಅವರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.
ಒಂದೆರಡು ದಿನಗಳ ವರೆಗೆ ಬಿಡುವು ಕೊಟ್ಟರೂ ಹೇಗೋ ಅಲ್ಪ ಸ್ವಲ್ಪ ಬೆಳೆಯಾದರೂ ಉಳಿಸಿಕೊಳ್ಳಬಹುದು ಎಂಬುದು ರೈತರ ವಿಚಾರ. ಆದರೆ, ಮಳೆರಾಯ ಕೊಂಚವೂ ಬಿಡುವಿಲ್ಲದೆ ಧೋ.. ಎಂದು ಒಂದೇ ಸಮನೆ ಸುರಿಯುತ್ತಿದ್ದಾನೆ.
ಜಿಲ್ಲೆಯಲ್ಲಿ ಸೋಯಾ ಅವರೆ, ತೊಗರಿ, ಕಬ್ಬು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದು, ಸದ್ಯಕ್ಕೆ ಮಳೆಯಿಂದ ಈ ಬೆಳೆಗಳಿಗೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ತೇವಾಂಶ ತಡೆದುಕೊಳ್ಳುವ ಶಕ್ತಿ ಈ ಬೆಳೆಗಳಿಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಮಳೆ ಬೇಕೆಂದಾಗ ಸುರಿಯುವುದಿಲ್ಲ. ಬೇಡವೆಂದಾಗ ಸುರಿಯುತ್ತದೆ. ನಾಲ್ಕೈದು ದಿನ ಮಳೆ ಬಿಡುವು ಕೊಟ್ಟರೆ ಉದ್ದು, ಹೆಸರು ರಾಶಿ ಮಾಡಬಹುದು. ಆದರೆ, ಮಳೆ ಸ್ವಲ್ಪವೂ ಬಿಡುವು ಕೊಡುತ್ತಿಲ್ಲ. ಹಾಕಿದ ಬಂಡವಾಳವೂ ಕೈಸೇರುವ ಸಾಧ್ಯತೆ ಇಲ್ಲ’ ಎಂದು ಕಮಠಾಣದ ರೈತ ಬಸವರಾಜ್ ಬೇಸರದಿಂದ ನುಡಿದರು.
‘ಪ್ರಕೃತಿಯ ಮೇಲೆ ಯಾರದ್ದೂ ನಡೆಯುವುದಿಲ್ಲ. ಕೊಂಚ ಬಿಡುವು ಕೊಟ್ಟರೆ ಉದ್ದು, ಹೆಸರು ಉಳಿಯುತ್ತದೆ. ಆದರೆ, ಮಳೆ ನಿಲ್ಲುವ ಲಕ್ಷಣಗಳೇ ಕಾಣಸುತ್ತಿಲ್ಲ. ಎತ್ತರದ ಪ್ರದೇಶದಲ್ಲಿರುವ ರೈತರಿಗೆ ಇನ್ನೊಂದು ವಾರ ಕಾಲಾವಕಾಶ ಇದೆ. ಆದರೆ, ತಗ್ಗು ಪ್ರದೇಶದಲ್ಲಿ ಬೆಳೆ ಉಳಿಯುವುದು ಅನುಮಾನ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್.
ಈಗ ಉದ್ದು ಹೆಸರು ರಾಶಿ ಮಾಡುವ ಸಮಯ. ಆದರೆ ಮಳೆ ಸುರಿಯುತ್ತಿರುವುದರಿಂದ ಕಟಾವು ಸಾಧ್ಯವಾಗಿಲ್ಲ. ಮಳೆ ಬಿಡುವು ಕೊಡದಿದ್ದರೆ ಬೆಳೆ ಹಾಳಾಗುವ ಸಾಧ್ಯತೆ ಹೆಚ್ಚಿದೆ.–ದೇವಿಕಾ ಆರ್. ಜಂಟಿ ಕೃಷಿ ನಿರ್ದೇಶಕಿ ಬೀದರ್
ಒಂದೇ ದಿನ 30 ಸೆಂ.ಮೀ ಮಳೆ ಭಾನುವಾರದಿಂದ ಸೋಮವಾರದ (ಆ.17ರಿಂದ 18) ನಡುವೆ ಬೀದರ್ ಜಿಲ್ಲೆಯಲ್ಲಿ ಶೇಕಡಾ 574ರಷ್ಟು ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ತಿಳಿಸಿದೆ. ಜಿಲ್ಲಾಡಳಿತವು ಒಂದೇ ದಿನ 30 ಸೆಂ.ಮೀ. ದಾಖಲೆ ಮಳೆಯಾಗಿದೆ ಎಂದು ತಿಳಿಸಿದೆ. ಅದರಲ್ಲೂ ಜಿಲ್ಲೆಯ ಕಮಲನಗರ ಹಾಗೂ ಔರಾದ್ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಅತಿ ಹೆಚ್ಚು ಹಾನಿ ಕೂಡ ಸಂಭವಿಸಿದ್ದು ಈ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ. ಸ್ಥಳೀಯರು ಇದನ್ನು ಮೇಘ ಸ್ಫೋಟ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.