ADVERTISEMENT

ಬೀದರ್: ಭಾರಿ ಮಳೆಗೆ ಹೊಳೆಯಂತಾದ ರಸ್ತೆಗಳು

ಸರ್ಕಾರಿ ಕಚೇರಿಗಳು, ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:19 IST
Last Updated 6 ಆಗಸ್ಟ್ 2025, 5:19 IST
ಬೀದರ್‌ನ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣ ಜಲಾವೃತವಾಗಿರುವುದು
ಬೀದರ್‌ನ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣ ಜಲಾವೃತವಾಗಿರುವುದು   

ಬೀದರ್: ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ, ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ, ಶಿವಾಜಿ ಮಹಾರಾಜರ ವೃತ್ತ, ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆ ಮೈದಾನ, ಲೋಕೋಪಯೋಗಿ ಇಲಾಖೆಯ ಕಚೇರಿ, ಮನ್ನಳ್ಳಿ ರಸ್ತೆಯ ಹಾರೂರಗೇರಿ ಕಮಾನು, ರಾಮ್ ಚೌಕ್, ಮೈಲೂರ್ ಕ್ರಾಸ್, ಗುಂಪಾ ರಿಂಗ್ ರೋಡ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡಿದ್ದರಿಂದ ಜನ ತೀವ್ರ ಪರದಾಟ ನಡೆಸಿದರು. ಪಾದಚಾರಿಗಳಿಗೂ ಸಮಸ್ಯೆ ಉಂಟಾಯಿತು.

ಮಧ್ಯಾಹ್ನ ಎರಡೂವರೆ ಗಂಟೆಗೆ ಶುರುವಾದ ಜೋರು ಮಳೆ ಸಂಜೆ ಐದು ಗಂಟೆಗೆ ಎಡೆಬಿಡದೇ ಸುರಿಯಿತು. ತರಕಾರಿ, ಹಣ್ಣು ಸೇರಿದಂತೆ ಇತರೆ ಬೀದಿ ಬದಿ ವ್ಯಾಪಾರಿಗಳು ಸಮಸ್ಯೆ‌ ಅನುಭವಿಸಿದರು. ಖಾಲಿ ನಿವೇಶನಗಳಲ್ಲಿ ಅಪಾರ ನೀರು ನಿಂತಿದ್ದರಿಂದ ಸಣ್ಣ ಕೆರೆಗಳಂತೆ ಭಾಸವಾಯಿತು. ಮಳೆ ನಿಲ್ಲುವವರೆಗೂ ಜನ ರಸ್ತೆಬದಿಯ ಕಟ್ಟಡಗಳ ಅಡಿ ಹೆಚ್ಚಿನ ಸಂಖ್ಯೆಯಲ್ಲಿ ನಿಂತುಕೊಂಡಿದ್ದರು.

ADVERTISEMENT

ನಗರಕ್ಕೆ ಹೊಂದಿಕೊಂಡಿರುವ ಶಹಾಪುರ, ಗೋರನಳ್ಳಿ,‌ ಹಳ್ಳದಕೇರಿ, ಚಿಟ್ಟಾ, ಅಮಲಾಪುರ, ಕಮಠಾಣ, ಕೊಳಾರ ಸೇರಿದಂತೆ ಹಲವು ಕಡೆಗಳಲ್ಲಿ ಬಿರುಸಿನ ಮಳೆಯಾಗಿದೆ. ಸತತ ಮೂರನೇ ದಿನವೂ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆ ನೀರಿನಲ್ಲೇ ಜನ ಪರದಾಟ ನಡೆಸಿದರು
ಜನವಾಡ ರಸ್ತೆ ಜಲಾವೃತವಾಗಿದ್ದು ಮಹಿಳೆಯರು ಪರದಾಡುತ್ತ ನಡೆದುಕೊಂಡು ಹೋದರು

ಜಿಲ್ಲೆಯ ವಿವಿಧೆಡೆ ಮಳೆ

ಹುಮನಾಬಾದ್: ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಮಳೆ ಸುರಿಯಿತು.

ಮಧ್ಯಾಹ್ನ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ದುಬಲಗುಂಡಿ, ಘಾಟಬೋರಾಳ್, ಹಳ್ಳಿಖೇಡ್ ಬಿ ಹಾಗೂ ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಚಾಂಗಲೇರಾ, ಬೇಮಳಖೇಡಾ, ಮನ್ನಾಏಖೇಳ್ಳಿ, ಕುಡಂಬಲ್ ಹಾಗೂ ಸುತ್ತಮುತ್ತಲಿ ನ ಗ್ರಾಮಗಳಲ್ಲಿಯೂ ಮಳೆ ಸುರಿಯಿತು.

ತಗ್ಗು ಪ್ರದೇಶದಲ್ಲಿ ನಿಂತ ನೀರು

ಜನವಾಡ: ಬೀದರ್ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಧಾರಾಕಾರ ಮಳೆ ಸುರಿಯಿತು.

ಹೊನ್ನಿಕೇರಿ, ಅತಿವಾಳ, ಚೊಂಡಿ, ಚೌಳಿ, ವಿಳಾಸಪುರ, ಚಿಕ್ಕಪೇಟೆ, ಮಾಮನಕೇರಿ, ಅಲಿಯಾಬಾದ್ (ಜೆ), ಚಿಟ್ಟಾ, ಚಿಟ್ಟಾವಾಡಿ, ಘೋಡಂಪಳ್ಳಿ, ಅಮಲಾಪುರ ಸೇರಿದಂತೆ ವಿವಿಧೆಡೆ ಮಧ್ಯಾಹ್ನ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ನಂತರ ಸಂಜೆವರೆಗೂ ಜಿಟಿ ಜಿಟಿಯಾಗಿ ಮುಂದುವರಿಯಿತು.

ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿತು. ಜನ ಜೀವನ ಅಸ್ತವ್ಯಸ್ತಗೊಂಡಿತು.

ಭಾಲ್ಕಿ: ಒಂದು ಗಂಟೆ ಸುರಿದ ಮಳೆ

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧಡೆ ಮಂಗಳವಾರ ಮಧ್ಯಾಹ್ನ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ತಾಲ್ಲೂಕಿನ ಭಾತಂಬ್ರಾ, ಬಸವನಗರ, ತೇಗಂಪೂರ, ತರನಳ್ಳಿ, ಧನ್ನೂರ, ಖಾನಾಪೂರ, ಸೇವಾನಗರ, ಹಲಬರ್ಗಾ, ಕೋನ ಮೇಳಕುಂದಾ, ಸಿದ್ದಾಪೂರವಾಡಿ, ಶೇಮಶೇರಪೂರವಾಡಿ, ಸಿದ್ದೇಶ್ವರ, ಕದಲಾಬಾದ್, ತಳವಾಡ, ಧಾರಜವಾಡಿ, ಕಲವಾಡಿ ಸೇರಿದಂತೆ ಇತರೆಡೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ಬೀದರ್‌ನ ಶಿವಾಜಿ ಮಹಾರಾಜರ ವೃತ್ತದಲ್ಲಿ ಸಂಗ್ರಹಗೊಂಡಿದ್ದ ಅಪಾರ ನೀರು
ಮಳೆಯಲ್ಲೆ ಕೊಡೆ ಹಿಡಿದುಕೊಂಡು ಹೆಜ್ಜೆ ಹಾಕಿದ ಕಾಲೇಜು ವಿದ್ಯಾರ್ಥಿನಿಯರು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.