ADVERTISEMENT

ಹುಲಸೂರ | ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:52 IST
Last Updated 16 ಸೆಪ್ಟೆಂಬರ್ 2025, 5:52 IST
ಹುಲಸೂರ ಪಟ್ಟಣದ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿರುವುದು
ಹುಲಸೂರ ಪಟ್ಟಣದ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿರುವುದು   

ಹುಲಸೂರ: ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ವಿವಿಧ ಓಣಿಗಳಲ್ಲಿನ ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ದವಸ–ಧಾನ್ಯ ಹಾಗೂ ದಿನಬಳಕೆ ವಸ್ತುಗಳು ತೊಯ್ದು ನಷ್ಟ ಉಂಟಾಗಿದೆ.

ತಗ್ಗು ಪ್ರದೇಶಗಳ ಮನೆಗಳಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡಿದ್ದು, ಕೆರೆಯಂತೆ ಭಾಸವಾಗುತ್ತಿತ್ತು. ಕೆಲವೆಡೆ ರಾತ್ರಿ ಪೂರ್ತಿ ವಿದ್ಯುತ್ ಸಂಪರ್ಕ ಇರಲಿಲ್ಲ. ವಾರ್ಡ್ ಸಂಖ್ಯೆ–1ರ ಅಲೆಮಾರಿ ಸಮುದಾಯದ ಬಾಣಂತಿಯೊಬ್ಬರು ಮಗುವಿನೊಂದಿಗೆ ರಾತ್ರಿ ಪೂರ್ತಿ ನಿದ್ದೆಗೆಟ್ಟ ‍ಪ್ರಸಂಗ ನಡೆಯಿತು.

ವಿವಿಧ ಕಡೆ ಸಾಮಾಜಿಕ ಕಾರ್ಯಕರ್ತರು ಜೆಸಿಬಿ ಮೂಲಕ ಚರಂಡಿಗಳಲ್ಲಿಯ ಹೂಳು ತೆಗೆದು ನೀರು ಸುಗಮವಾಗಿ ಹೋಗುವಂತೆ ವ್ಯವಸ್ಥೆ ಕಲ್ಪಿಸಿಕೊಟ್ಟರು.

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೀರು ಸಂಗ್ರಹಗೊಂಡ ಕಾರಣ ಅಲ್ಲಿಯೇ ಇರುವ ಅಂಗನವಾಡಿಗೆ ಹೊಗಲು ಸಾಧ್ಯವಾಗದ ಕಾರಣ ತಹಶೀಲ್ದಾರ್ ಅವರ ಮೌಖಿಕ ಆದೇಶದ ಮೇರೆಗೆ ರಜೆ ಘೋಷಣೆ ಮಾಡಲಾಯಿತು.

ಸೋಮವಾರ ಬೆಳಿಗ್ಗೆ ತಹಸೀಲ್ದಾರ್ ಶಿವಾನಂದ ಮೆತ್ರೆ ನೇತೃತ್ವದಲ್ಲಿ ತಂಡ ಸಮಸ್ಯೆ ಎದುರಾಗಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಗ್ರಾ.ಪಂ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು. ಅಗತ್ಯ ಇರುವ ಕಡೆ ಜೆಸಿಬಿ ಮೂಲಕ ನೀರು ಹಾದು ಹೋಗಲು ವ್ಯವಸ್ಥೆ ಮಾಡಬೇಕು. ಮುಂದೆ ಈ ರೀತಿ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜೆಸ್ಕಾಂ, ಲೊಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಗ್ರಾಮದ ಪ್ರಮುಖರು ಪಟ್ಟಣದಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ತಾ.ಪಂ ಇಒ ಮಹಾದೇವ ಜಮ್ಮು, ಗ್ರಾ.ಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಪಿಡಿಒ ರಮೇಶ ಮಿಲಿಂದಕರ, ಕಂದಾಯ ನಿರೀಕ್ಷಕ ನಾಗರಾಜ, ತಾ.ಪಂ ಸದಸ್ಯ ಗೋವಿಂದರಾವ ಸೋಮವಂಶಿ, ರಣಜೀತ್ ಗಾಯಕವಾಡ, ಸಿದ್ದು ಪಾರಶೇಟೆ, ಧನಾಜಿ ಸೂರ್ಯವಂಶಿ, ವಿದ್ಯಾಸಾಗರ ಬನಸೂಡೆ, ಸಂತೋಷ ಗಾಯಕವಾಡ, ಸಂಜೀವ ಭೂಸಾರೆ, ಯಾಸ್ಮಿನ್ ಪಟೇಲ್, ಶಿವು ಗಾಯಕವಾಡ, ಮನ್ಸೂರ್ ದಾವಲಜಿ, ಅಬ್ರಾರ ಸೌದಾಗರ ಉಪಸ್ಥಿತರಿದ್ದರು.

ಪಟ್ಟಣದ ಶಿವಾಜಿ ವೃತ್ತದಿಂದ ಜಾಮಿಯಾ ಮಸೀದಿವರೆಗೆ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣ ಮಾಡಿದ ಕಾರಣ ಹೆಚ್ಚು ಮಳೆ ಬಂದಾಗಲೆಲ್ಲ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ
ಗೋವಿಂದರಾವ ಸೋಮವಂಶಿ ತಾ.ಪಂ ಮಾಜಿ ಸದಸ್ಯ
ಒತ್ತುವರಿ ತೆರವು ಕಾರ್ಯಾಚರಣೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ ಸಮಸ್ಯೆ ಇರುವ ಕಡೆ ತಕ್ಷಣ ಪರಿಹರಿಸಲು ಸೂಚಿಸಿದ್ದೇನೆ
ಮಹಾದೇವ ಜಮ್ಮು ತಾ.ಪಂ ಇಒ
ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಕಾನೂನು ಬಾಹಿರವಾಗಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮಾಡಿಕೊಂಡು ತಡೆಗೋಡೆ ನಿರ್ಮಿಸಿದ ಕಾರಣ ಮಳೆ ನೀರು ಇತರೆ ಓಣಿಗಳ ಮನೆಗಳಿಗೆ ನುಗ್ಗಿದೆ. ಬೇಗ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಬೇಕು
ಧನಾಜಿ ಸೂರ್ಯವಂಶಿ ಗ್ರಾ.ಪಂ ಸದಸ್ಯ ಹುಲಸೂರ
ತುರ್ತು ಪರಿಹಾರ ಒದಗಿಸಿ:
ವಿಜಯಸಿಂಗ್ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ಪ್ರದೇಶಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರ ಎದುರು ಸಂತ್ರಸ್ತರು ಅಳಲು ತೋಡಿಕೊಂಡರು. ಪಟ್ಟಣದಲ್ಲಿ ಒತ್ತುವರಿ ಹೆಚ್ಚಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕ ರೀತಿಯಲ್ಲಿ ಚರಂಡಿಗಳನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು. ಅದನ್ನು ಆಲಿಸಿದ ವಿಜಯಸಿಂಗ್ ಅವರು ಕೂಡಲೇ ಪಿಡಿಒ ಹಾಗೂ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡರು. ಕೂಡಲೇ ತುರ್ತು ಪರಿಹಾರ ಒದಗಿಸಿ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.