ಬೀದರ್ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ
–ಪ್ರಜಾವಾಣಿ ಚಿತ್ರ ಲೋಕೇಶ ವಿ. ಬಿರಾದಾರ
ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಸುರಿದ ಗುಡುಗು ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಸಂಜೆ ಆರು ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ರಾತ್ರಿ 9ಗಂಟೆ ನಂತರವೂ ಜಿಟಿಜಿಟಿಯಾಗಿ ಮುಂದುವರೆದಿತ್ತು. ಮಂಗಳವಾರ ನಸುಕಿನ ಜಾವ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಸಾಧಾರಣ ಮಳೆಯಾಗಿತ್ತು. ಮಧ್ಯಾಹ್ನ 12ರ ವರೆಗೆ ಮೋಡ ಕವಿದ ವಾತಾವರಣ ಇತ್ತು. ಬಳಿಕ ಸಂಜೆ ತನಕ ಪ್ರಖರವಾದ ಬಿಸಿಲು ಇತ್ತು. ಸಂಜೆ ಆರು ಗಂಟೆಗೆ ಭಾರಿ ಗಾಳಿಯೊಂದಿಗೆ ಮಳೆ ಆರಂಭಗೊಂಡಿತು. ಜೋರು ಮಳೆಗೆ ವಾಹನ ಚಾಲಕರಿಗೆ ರಸ್ತೆ ಕಾಣದೇ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಿದರು. ಬಹುತೇಕರು ಇಂಡಿಕೇಟರ್‌ಗಳನ್ನು ಆನ್ ಮಾಡಿ ನಿಧಾನವಾಗಿ ವಾಹನಗಳನ್ನು ಚಲಾಯಿಸಿದರು.
ಪಾದಚಾರಿಗಳು, ಬೈಕ್ ಸವಾರರು ಕಟ್ಟಡಗಳ ಅಡಿ ಆಶ್ರಯ ಪಡೆದಿದ್ದರು. ವಿದ್ಯಾನಗರ, ಹಾರೂರಗೇರಿ, ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು.
ಜೋರು ಗಾಳಿಗೆ ವಿದ್ಯುತ್ ತಂತಿಗಳು ಸ್ಪರ್ಶಿಸಿ ವಿದ್ಯುತ್ ಕೈಕೊಟ್ಟಿತು. ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ವಿದ್ಯುತ್ ಪೂರೈಕೆ ಇರಲಿಲ್ಲ. ಬಿಟ್ಟೂ ಬಿಡದೇ ಮಳೆ ಸುರಿಯಿತು. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬಿರುಸಿನ ಮಳೆಗೆ ವಾತಾವರಣ ಸಂಪೂರ್ಣ ತಂಪಾಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಬೀದರ್ ತಾಲ್ಲೂಕಿನ ಮರಕಲ್, ಜನವಾಡ, ಚಿಕ್ಕಪೇಟೆ, ಮಾಮನಕೇರಿ, ಬೆನಕನಳ್ಳಿ, ಚಿಟ್ಟಾ, ಘೋಡಂಪಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಜಿಲ್ಲೆಯ ಔರಾದ್, ಹುಮನಾಬಾದ್, ಚಿಟಗುಪ್ಪ, ಕಮಲನಗರ ಹಾಗೂ ಭಾಲ್ಕಿಯಲ್ಲೂ ಮಳೆಯಾಗಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.