ಔರಾದ್: ತಾಲ್ಲೂಕಿನ ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಪರಿಸರದಲ್ಲಿ ಬುಧವಾರ ‘ಶ್ರೀ ಕುಮಾರ ತಪೋವನ’ಕ್ಕೆ ಚಾಲನೆ ನೀಡಲಾಯಿತು.
ಸಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಪರಿಸರ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ ಸಸಿ ನೆಟ್ಟು ಅದರ ಪೋಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಾರುಕಲಿಂಗ ಶಿವಾಚಾರ್ಯರು ಮಾತನಾಡಿ, ‘ಹೆಡಗಾಪುರ ಮಠದ ಶಿವಲಿಂಗ ಶಿವಾಚಾರ್ಯರ ಮಾರ್ಗದರ್ಶನಲ್ಲಿ ಮಠದ ಎರಡು ಎಕರೆ ಪ್ರದೇಶದಲ್ಲಿ ಶ್ರೀ ಕುಮಾರ ತಪೋವನಕ್ಕೆ ಚಾಲನೆ ನೀಡಲಾಗಿದೆ. ಅನುದಿನ ಅನುಸರಿಸು ಸಂಸ್ಥೆ ಆಶ್ರಯದಲ್ಲಿ ಊರಿಗೊಂದು ವನ ಯೋಜನೆಯ ಭಾಗವಾಗಿ ಈ ತಪೋವನ ಆರಂಭಿಸಲಾಗಿದೆ’ ಎಂದರು.
‘ಪರಿಸರ ಮಾಲಿನ್ಯ ದೇಶಕ್ಕೆ ದೊಡ್ಡ ಸಮಸ್ಯೆ. ಇದರಿಂದ ಮಾನವ ಸೇರಿದಂತೆ ಎಲ್ಲ ಜೀವಿಗಳು ಪರಿಣಾಮ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಊರಿಗೊಂದು ವನ ಅಭಿಯಾನ ನಡೆಸುತ್ತಿದ್ದೇವೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.
ಹೆಡಗಾಪುರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು, ಬೊಮ್ಮಲಿಂಗ ಸ್ವಾಮೀಜಿ, ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ, ಶ್ರೀಮಂತ ಪಾಟೀಲ, ಹಣಮಂತ ಯರನಾಳೆ, ಶಿವಲಿಂಗ ಚಿಟ್ಟಾ, ಮಲ್ಲಪ್ಪ ರಾಮಶೆಟ್ಟಿ, ಕಾಶಿನಾಥ, ಆಕಾಶ, ಪ್ರಶಾಂತ ಬೆಳಕುಣೆ, ಶಂಕ್ರಯ್ಯ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.