
ಬೀದರ್: ‘ಎಚ್‌ಐವಿ ಸೋಂಕಿತರನ್ನು ವಧು–ವರರ ಸಮಾವೇಶದ ಮೂಲಕ ಮದುವೆ ಮಾಡಲಾಗುತ್ತಿದ್ದು, ರಾಜ್ಯದಾದ್ಯಂತ ಇದುವರೆಗೆ 120 ಜನರ ವಿವಾಹ ಮಾಡಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಉಪನಿರ್ದೇಶಕ ಗೋವಿಂದರಾಜು ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ವಧು-ವರರ ಅನ್ವೇಷಣಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬರುವ ದಿನಗಳಲ್ಲಿ ಆನ್‌ಲೈನ್ ಮ್ಯಾಟ್ರಿಮೋನಿ ಜಾಲತಾಣ ವೇದಿಕೆ ಸೃಷ್ಟಿಸಲಾಗುವುದು. ಅದರಲ್ಲಿ ಎಚ್.ಐ.ವಿ ಸೋಂಕಿತರು ನೋಂದಣಿ ಮಾಡಿಸಿಕೊಂಡು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾವೇಶದ ಸದುಪಯೋಗವನ್ನು ಎಚ್‌ಐವಿ ಸೋಂಕಿತರು ಪಡೆದುಕೊಳ್ಳಬೇಕು ಎಂದರು.
ಸೊಸೈಟಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಸಿ. ಮಾತನಾಡಿ, ಸಮಾವೇಶದಲ್ಲಿ ವಧು ವರರು ತಮ್ಮ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅನೀಲಕುಮಾರ ಚಿಂತಾಮಣಿ ಮಾತನಾಡಿ, 2030 ರೊಳಗೆ ಎಚ್.ಐ.ವಿ/ಏಡ್ಸ್ ಸೋಂಕಿತರ ಸಂಖ್ಯೆ ಸೊನ್ನೆಗೆ ತರಲು ಹಲವಾರು ಕಾರ್ಯಕ್ರಮ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವಿಜಯಪುರ ಎಆರ್‌ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕ ರವಿಕಿತ್ತೂರು ಕಾರ್ಯಕ್ರಮದ ಉದ್ದೇಶ ವಿವರಿಸಿದರು. ವಧು –ವರರು, ಅವರ ಪೋಷಕರು ಪಾಲ್ಗೊಂಡಿದ್ದರು. ಪ್ರಯೋಗ ಶಾಲಾ ತಂತ್ರಜ್ಞರ ಅರವಿಂದ ಕುಲಕರ್ಣಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.