ಬೀದರ್: ‘ಮನೆ ಬಾಗಿಲಿಗೆ ಹೋಗಿ ಆರೋಗ್ಯ ಸೇವೆ ಒದಗಿಸಲು ‘ಗೃಹ ಆರೋಗ್ಯ ಯೋಜನೆ’ ಜಾರಿಗೆ ತಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ನಿಯಂತ್ರಣ ಕೋಶ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಗೃಹ ಆರೋಗ್ಯ ಯೋಜನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ , ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಮಾನಸಿಕ ಆರೋಗ್ಯ, ನರರೋಗ ಸೇರಿದಂತೆ 14 ಅಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ 30 ವರ್ಷ ಮೇಲಿನವರಿಗೆ ಉಚಿತವಾಗಿ ತಪಾಸಣೆ ಮಾಡಿ, ಚಿಕಿತ್ಸೆ ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ರಾಜ್ಯ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪರಿಸರ ಮಾಲಿನ್ಯದಿಂದ ಆಹಾರ, ನೀರು, ಗಾಳಿ ಮಲಿನವಾಗುತ್ತಿದೆ. ಬದಲಾದ ಜೀವನ ಶೈಲಿ, ಒತ್ತಡದ ಜೀವನ ಮತ್ತು ದುಶ್ಚಟಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಸಾಂಕ್ರಾಮಿಕ ರೋಗಗಳಿಂದ ಶೇ 60ರಷ್ಟು ಜನ ಮರಣ ಹೊಂದುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಹೀಗಾಗಿಯೇ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಈ ಯೋಜನೆಯ ಅನುಷ್ಠಾನದಲ್ಲಿ ವೈದ್ಯರು, ಆಯುಷ್ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ಪಾತ್ರ ದೊಡ್ಡದಿದೆ. ಮನೆ ಮನೆಗೆ ಭೇಟಿ ಕೊಟ್ಟು ನೂರಕ್ಕೆ ನೂರು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಅಹಮದುದ್ದೀನ್, ಜಿಲ್ಲಾ ಸರ್ವೇಕ್ಷಣ ಆಧಿಕಾರಿ ಶಂಕರೆಪ್ಪ ಬೊಮ್ಮಾ ಮತ್ತಿತರರು ಇದ್ದರು.
- ಗೃಹ ಆರೋಗ್ಯ ಯೋಜನೆ ಜಾರಿಗೆ 30 ವರ್ಷ ಮೇಲಿನವರಿಗೆ ಚಿಕಿತ್ಸೆ ಮನೆಗೆ ಭೇಟಿ ಕೊಟ್ಟು ತಪಾಸಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.