ಏಪ್ರಿಲ್ 10ರಂದು ಬಿರುಗಾಳಿ ಮಳೆಗೆ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ನೆಲಕ್ಕೆ ಬಿದ್ದ ಮಾವಿನ ಹಣ್ಣು ಸಂಗ್ರಹಿಸುತ್ತಿರುವುದು
ಬೀದರ್: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ತೋಟಗಾರಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮೂರ್ನಾಲ್ಕು ದಿನ ಸುರಿದ ಬಿರುಗಾಳಿ ಮಳೆಗೆ ₹14 ಕೋಟಿಗೂ ಅಧಿಕ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 325 ಹೆಕ್ಟೇರ್‌ಗೂ ಅಧಿಕ ಪ್ರದೇಶದ ತೋಟಗಾರಿಕೆ ಬೆಳೆ ನೆಲಕಚ್ಚಿದೆ. ಸುಮಾರು 400 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತೋಟಗಾರಿಕೆ ಬೆಳೆಗಳು ಹಾಳಾಗಿರುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
ಮಾವು, ಟೊಮೆಟೊ, ಪಪ್ಪಾಯ್, ತರಕಾರಿ, ಈರುಳ್ಳಿ, ಕಲ್ಲಂಗಡಿಗೆ ಹೆಚ್ಚಿನ ಪೆಟ್ಟು ಬಿದ್ದಿದೆ. ಮಾವು ಮಾರುಕಟ್ಟೆಗೆ ಹೋಗುವ ಹೊತ್ತಿನಲ್ಲೇ ಬಿರುಗಾಳಿ ಮಳೆ ಬಂದದ್ದರಿಂದ ಮಾವು ಬೆಳೆಗಾರರಿಗೆ ಹೆಚ್ಚಿನ ಹಾನಿ ಆಗಿದೆ.
ಗಾಳಿ ಮಳೆಗೆ ಹೆಚ್ಚಿನ ಮಾವು ಕೆಳಗೆ ಬಿದ್ದು ಹಾಳಾಗಿದೆ. ಹಣ್ಣುಗಳಲ್ಲಿ ರೋಗ ಕೂಡ ಕಾಣಿಸಿಕೊಂಡಿದ್ದರಿಂದ ಮಾವು ಬೆಳೆಗಾರರು ಒಲ್ಲದ ಮನಸ್ಸಿನಿಂದ ಮಾರುಕಟ್ಟೆಗೆ ಕಳಿಸಲಾಗದೆ ತಿಪ್ಪೆಗೆ ಎಸೆದಿದ್ದಾರೆ. ಬೀದರ್, ಚಿಟಗುಪ್ಪ ತಾಲ್ಲೂಕಿನಲ್ಲಿ ಹೆಚ್ಚಿನ ಮಾವು ಹಾಳಾಗಿದೆ. ನಷ್ಟದಲ್ಲಿ ನಂತರದ ಸ್ಥಾನ ಕಲ್ಲಂಗಡಿ, ಪಪ್ಪಾಯಕ್ಕಿದೆ. ಟೊಮೆಟೊ, ಈರುಳ್ಳಿ ಸೇರಿದಂತೆ ಇತರೆ ತರಕಾರಿ ಕೂಡ ಹೆಚ್ಚಾಗಿ ಹಾಳಾಗಿದೆ.
‘ತೋಟಗಾರಿಕೆ ಬೆಳೆಗಳು ಬೆಳೆಯಬೇಕಾದರೆ ಸಾಕಷ್ಟು ಬಂಡವಾಳ ಹಾಕಬೇಕಾಗುತ್ತದೆ. ಹೆಚ್ಚಿನ ಲಾಭ ಕೂಡ ತಂದುಕೊಡುತ್ತವೆ. ಆದರೆ, ಬಿರುಗಾಳಿ ಮಳೆಗೆ ಬಹಳಷ್ಟು ಹಾಳಾಗಿದೆ. ಕನಿಷ್ಠ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ. ಜಿಲ್ಲಾಡಳಿತ ಸಮೀಕ್ಷೆ ಕಾರ್ಯ ಬೇಗ ಮುಗಿಸಿ, ಶೀಘ್ರ ಪರಿಹಾರ ಒದಗಿಸಬೇಕು. ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹50 ಸಾವಿರ ಪರಿಹಾರ ಕೊಡಬೇಕು.ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ವಿಶ್ವನಾಥ ಜಿ. ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಮಳೆಯಿಂದಾದ ನಷ್ಟದ ಬಗ್ಗೆ ಈಗಾಗಲೇ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು ವಿವರ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.ವಿಶ್ವನಾಥ ಜಿ. ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.