ADVERTISEMENT

ಭಾಲ್ಕಿ | ಮಳೆಗೆ ಸೋರುವ ತುರ್ತು ಚಿಕಿತ್ಸಾ ಘಟಕ!

ಭಾತಂಬ್ರಾ ರೋಗಿಗಳಿಗೆ ಸಿಗದ ಬ್ರೆಡ್‌, ಹಾಲು, ಮೊಟ್ಟೆ; ಆರೋಪ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 5:57 IST
Last Updated 24 ಜುಲೈ 2024, 5:57 IST
ಚಿತ್ರ ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮಳೆಗೆ ಸೋರುತ್ತಿರುವುದು
ಚಿತ್ರ ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮಳೆಗೆ ಸೋರುತ್ತಿರುವುದು   

ಭಾಲ್ಕಿ: ಮಳೆಗೆ ಸೋರುವ ತುರ್ತು ಚಿಕಿತ್ಸಾ ಘಟಕ, ಗಬ್ಬು ನಾರುವ ಶೌಚಾಲಯ, ಪಾಳು ಬಿದ್ದಿರುವ ಮಾದರಿ ಶೌಚಾಲಯ, ದೂಳು ತಿನ್ನುತ್ತಿರುವ ನೀರು ಶುದ್ಧೀಕರಣ ಘಟಕ, ನಿಷ್ಪ್ರಯೋಜಕ ಸ್ಥಿತಿಯಲ್ಲಿರುವ ವಾಷಿಂಗ್‌ ಮಷಿನ್‌, ಕಣ್ಣಿನ ತಜ್ಞರ, ಫಾರ್ಮಾಸಿಸ್ಟ್‌ ಸಿಬ್ಬಂದಿ ಕೊರತೆ, ಆರಂಭವಾಗದ ಪ್ರಯೋಗಾಲಯ....

ಹೀಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದೆ. ಇನ್ನು ಆಸ್ಪತ್ರೆಯ ಒಳ ರೋಗಿಗಳಿಗೆ ಪೌಷ್ಟಿಕಾಂಶ ಹೆಚ್ಚಳಕ್ಕೆ ಅಗತ್ಯವಾಗಿರುವ ಮೊಟ್ಟೆ, ಹಾಲು, ಬ್ರೆಡ್‌ ಸಿಗುತ್ತಿಲ್ಲ ಎಂಬುದು ಬಾಣಂತಿಯರು, ರೋಗಿಗಳ ಆರೋಪ ಸಾಮಾನ್ಯವಾಗಿದೆ.

ತಾಲ್ಲೂಕಿನ ವಿವಿಧೆಡೆ ಖಾಲಿ ಇರುವ ವೈದ್ಯರ ಕೊರತೆಯಿಂದ ರೋಗಿಗಳಿಗೆ, ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲ ಸಮಯದಲ್ಲೂ ಸ್ವಚ್ಛ ನೀರು ಒದಗಿಸಬೇಕಾದ ನೀರು ಶುದ್ಧೀಕರಣ ಘಟಕ ಹಾಳಾಗಿದೆ.

ADVERTISEMENT

ಶೌಚಾಲಯವಂತೂ ರೋಗಿಗಳಿಗೆ ಇನ್ನಷ್ಟು ಸಮಸ್ಯೆ ಹೆಚ್ಚಿಸಿದೆ. ಕೆಕೆಆರ್‌ಡಿಬಿಯ ₹10 ಲಕ್ಷ ಅನುದಾಡಿಯಲ್ಲಿ 2016-17ರಲ್ಲಿ ನಿರ್ಮಿಸಲಾದ ಮಾದರಿ ಶೌಚಾಲಯ ಪಾಳು ಬಿದ್ದಿದೆ. ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞ, ಚರ್ಮರೋಗ ತಜ್ಞರ, ಫಾರ್ಮಾಸಿಸ್ಟ್‌ ಸೇರಿದಂತೆ ಕೆಲ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಸವಲತ್ತುಗಳಿಗೆ ತೊಡಕು ಉಂಟಾಗುತ್ತಿದೆ ಎಂದು ಸಾರ್ವಜನಿಕರು, ರೋಗಿಗಳು ಆರೋಪಿಸಿದ್ದಾರೆ.

ವಾಟರ್‌ ಫಿಲ್ಟರ್‌ ಘಟಕ ಚಾಲೂ ಮಾಡಿದರೂ ಜನರು ಹೆಚ್ಚಾಗಿ ಬಳಸುತ್ತಿಲ್ಲ. ಹೊರಗಡೆಯಿಂದ ಫಿಲ್ಟರ್‌ ಕ್ಯಾನ್‌ಗಳಲ್ಲಿ ನೀರು ತರಿಸಲಾಗುತ್ತಿದೆ. ರೋಗಿಗಳಷ್ಟೇ ಅಲ್ಲದೆ ವಿವಿಧ ಅಂಗಡಿ, ಫುಟ್‌ಪಾತ್‌ಗಳ ಜನರು ಆಸ್ಪತ್ರೆಯ ಶೌಚಾಲಯ ಬಳಸುವುದರಿಂದ ದುರ್ವಾಸನೆ ಬೀರುತ್ತಿದೆ.

‘ಶೌಚಾಲಯ ಸ್ವಚ್ಛ ಮಾಡಿಸುತ್ತೇವೆ. ಮಾದರಿ ಶೌಚಾಲಯದ ಟೆಂಡರ್‌ ಹೊರಗಿನವರು ತೆಗೆದುಕೊಳ್ಳಲು ಮುಂದೆ ಬಾರದೇ ಇರುವುದರಿಂದ ಪಾಳು ಬಿದ್ದಿದೆ. ವಾಷಿಂಗ್‌ ಮಷಿನ್‌ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ಕೊರತೆಯಿಂದ ವಾಷಿಂಗ್‌ ಮಷಿನ್‌ ನಿಷ್ಪ್ರಯೋಜಕ ಆಗಿದೆ. ಹಾಲು, ಮೊಟ್ಟೆ, ಬ್ರೆಡ್‌ ಕೂಡ ಕೊಡಲಾಗುತ್ತಿದೆ‘ ಎನ್ನುತ್ತಾರೆ ಮುಖ್ಯ ವೈದ್ಯಾಧಿಕಾರಿ ಡಾ.ಅಬ್ದುಲ್‌ ಖಾದರ್‌.

ನಿಟ್ಟೂರ (ಬಿ): ವೈದ್ಯರ ಕೊರತೆ: ತಾಲ್ಲೂಕಿನ ನಿಟ್ಟೂರ (ಬಿ) ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಖ್ಯವಾಗಿ ಸ್ತ್ರೀರೋಗ ತಜ್ಞೆ, ಮಕ್ಕಳ ವೈದ್ಯರ ಕೊರತೆ ಇರುವುದರಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗದೇ ಅನಾನುಕೂಲ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಸಿಜೇರಿಯನ್‌ ಪ್ರಕರಣಗಳು ಬಂದಾಗ ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆ ಇಲ್ಲವೇ ಬೀದರ್‌ಗೆ ಹೋಗಬೇಕಾದ ಅನಿವಾರ್ಯತೆ ರೋಗಿಗಳದ್ದಾಗಿದೆ. ಕೂಡಲೇ ವೈದ್ಯರನ್ನು ನೇಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಬಲವೀರ ಪಾಟೀಲ ಒತ್ತಾಯಿಸಿದರು.

ತಾಯಿ ಮತ್ತು ಮಗು ಆಸ್ಪತ್ರೆ ಆರಂಭಕ್ಕೆ ಬೇಡಿಕೆ: ತಾಲ್ಲೂಕಿನ ಗರ್ಭಿಣಿ, ಬಾಣಂತಿಯರ ಮತ್ತು ಮಕ್ಕಳ ಸದೃಢ ಆರೋಗ್ಯದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಆರಂಭಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ ಆಗಿದೆ. ಶಿಶು ಹಾಗೂ ಬಾಣಂತಿಯರ ಆರೈಕೆ, ರಕ್ತಹೀನತೆ ತಡೆಗಟ್ಟಲು ಅನುಕೂಲ ಆಗುತ್ತದೆ. ಇನ್ನು 24/7 ಅವಧಿಯ ಶಸ್ತ್ರ ಚಿಕಿತ್ಸೆ, ಡಯಾಗ್ನೊಸ್ಟಿಕ್‌ ಲ್ಯಾಬೊರೇಟರಿ ಸೌಲಭ್ಯಗಳು ಲಭ್ಯವಾಗುತ್ತವೆ ಎಂದು ಜನರು ಒತ್ತಾಯಿಸಿದ್ದಾರೆ.

‘ತಾಯಿ ಮತ್ತು ಮಗು ಆಸ್ಪತ್ರೆ ಆರಂಭಕ್ಕೆ ಸಚಿವ ಈಶ್ವರ ಖಂಡ್ರೆ ಅವರು ವಿಶೇಷ ಆಸಕ್ತಿ ತೋರಿದ್ದಾರೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ‘ ಎಂದು ಮುಖ್ಯ ವೈದ್ಯಾಧಿಕಾರಿ ಅಬ್ದುಲ್‌ ಖಾದರ್‌ ತಿಳಿಸಿದರು.

‘ಭಾತಂಬ್ರಾ, ಹಲಬರ್ಗಾ, ಧನ್ನೂರ, ಖಟಕ ಚಿಂಚೋಳಿ ಆಸ್ಪತ್ರೆಯಲ್ಲಿ ಮಾತ್ರ ದಿನದ 24 ಗಂಟೆಗಳೂ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಈಚೆಗೆ ಹಾಲಹಳ್ಳಿ ಆಸ್ಪತ್ರೆಯಲ್ಲೂ ಈ ಸೇವೆ ನೀಡಲಾಗುತ್ತಿದೆ. ಉಳಿದ ಏಳು ಆರೋಗ್ಯ ಕೇಂದ್ರಗಳಲ್ಲಿಯೂ ಸಾರ್ವಜನಿಕರಿಗೆ ದಿನದ ಎಲ್ಲ ಸಮಯದಲ್ಲೂ ವೈದ್ಯಕೀಯ ಸೇವೆ ನೀಡಲು ಕೆಲ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ತೊಡಕಾಗಿ ಪರಿಣಮಿಸಿದೆ. ಹಾಗಾಗಿ, ಸರ್ಕಾರ ಕೂಡಲೇ ಎಲ್ಲ ಆಸ್ಪತ್ರೆಗಳಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಬೇಕು ಮತ್ತು ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ಯಾರು ಏನಂದರು?

ಆಸ್ಪತ್ರೆಯ ಕಟ್ಟಡ 40 ವರ್ಷಗಳಷ್ಟು ಹಳೆಯದಾಗಿದೆ. ತುರ್ತು ಚಿಕಿತ್ಸಾ ಘಟಕದ ಮೇಲ್ಛಾವಣಿಯಲ್ಲಿ ಬಿರುಕು ಬಿಟ್ಟಿದೆ. ಈಗಾಗಲೇ ಎರಡು ಸಾರಿ ರಿಪೇರಿ ಮಾಡಿದ್ದೇವೆ. ಈಗ ಮತ್ತೆ ರಿಪೇರಿ ಮಾಡಿಸುತ್ತೇವೆ. ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣದ ಯೋಜನೆ ಇದೆ – ಡಾ.ಅಬ್ದುಲ್‌ ಖಾದರ್‌, ಮುಖ್ಯ ವೈದ್ಯಾಧಿಕಾರಿ

ಭಾತಂಬ್ರಾ ನಿಟ್ಟೂರ (ಬಿ) ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳ ಕಾಯಂ ವೈದ್ಯರ ಕೊರತೆ ತಾತ್ಕಾಲಿಕವಾಗಿ ನೀಗಿಸಲು ಇತರ ಆಸ್ಪತ್ರೆಗಳ ವೈದ್ಯರನ್ನು ನಿಯೋಜಿಸಲಾಗಿದೆ. ಮೇಥಿಮೇಳಕುಂದಾ ಆಸ್ಪತ್ರೆಯ ವೈದ್ಯರು ಭಾತಂಬ್ರಾ ಆಸ್ಪತ್ರೆಯಲ್ಲಿ ವಾರದಲ್ಲಿ ಮೂರು ದಿನ ಸೇವೆ ನೀಡುತ್ತಿದ್ದಾರೆ – ಡಾ.ರವಿ ಕಲಶೆಟ್ಟಿ, ತಾಲ್ಲೂಕು ವೈದ್ಯಾಧಿಕಾರಿ

ಆಸ್ಪತ್ರೆಯಲ್ಲಿ ಬ್ರೆಡ್‌ ಹಾಲು ಮೊಟ್ಟೆ ಕೊಟ್ಟಿಲ್ಲ. ಬೆಳಿಗ್ಗೆಯ ಉಪಹಾರಕ್ಕೆ ಉಪ್ಪಿಟ್ಟು ನೀಡಿದ್ದಾರೆ. ಮಧ್ಯಾಹ್ನ 2 ಗಂಟೆಯಾದರೂ ಊಟ ನೀಡಿಲ್ಲ. ಸ್ನಾನಕ್ಕೆ ಬೀಸಿ ನೀರು ಕೊಟ್ಟಿಲ್ಲ – ಜಾನಾಬಾಯಿ ಭಾಲ್ಕಿ

ನಮ್ಮ ಗ್ರಾಮದ ಆಸ್ಪತ್ರೆಯಲ್ಲಿ ಕಾಯಂ ವೈದ್ಯರು ಇಲ್ಲದಿರುವುದರಿಂದ ರೋಗಿಗಳಿಗೆ ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಗುಣಮಟ್ಟದ ಕಟ್ಟಡ ಸೌಕರ್ಯ ಇದ್ದರೂ ರೋಗಿಗಳಿಗೆ ಇದರ ಪ್ರಯೋಜನ ದೊರಕುತ್ತಿಲ್ಲ – ಮಹೇಶ ರಾಚೋಟೆ, ವಕೀಲ

ಚಿತ್ರ ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆ
ಚಿತ್ರ ಮೇಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು
ಚಿತ್ರ ಪಾಳು ಬಿದ್ದಿರುವ ಮಾದರಿ ಶೌಚಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.