
ಹುಲಸೂರ: ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟದಿಂದ ಗುರುವಾರ ಅನುಮೋದನೆ ದೊರೆತ ಹಿನ್ನೆಲೆ ಶಾಸಕರು ಹಾಗೂ ಬಿಜೆಪಿ ಮುಖಂಡರು ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಗ್ರಾಮ ಪಂಚಾಯಿತಿ ಎದುರು ಶಾಸಕ ಶರಣು ಸಲಗರ ಹಾಗೂ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿ ಶಾಸಕ ಶರಣು ಸಲಗರ, ‘ಪಟ್ಟಣದಲ್ಲಿ ಬೊಬ್ಬೆ ಹೊಡೆಯುವ ಮತ್ತು ಪ್ರತಿಭಟನೆ ಮೂಲಕ ಬಿಜೆಪಿ ವತಿಯಿಂದ ಸರ್ಕಾರದ ಗಮನಕ್ಕೆ ತಂದಿದ್ದೆ, ಸಚಿವರು, ಸಿಎಂ ಗಮನಕ್ಕೆ ತಂದಿದ್ದೆ. ಅಧಿವೇಶನದಲ್ಲೂ ಧ್ವನಿ ಎತ್ತಿದ್ದೆ, ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದು ಅಭಿವೃದ್ಧಿಗೆ ಹೊಸ ಆಯಾಮ ನೀಡಿದಂತಾಗುತ್ತದೆ’ ಎಂದರು.
‘ಚಳಿಗಾಲದ ಅಧಿವೇಶನಕ್ಕೂ ಮುನ್ನ ರೈತರ ಖಾತೆಗೆ ಮುಂಗಾರು ಬೆಳೆ ಹಾನಿ ಪರಿಹಾರ ಜಮೆ ಮಾಡಬೇಕು. ಇಲ್ಲದಿದ್ದರೆ ರೂತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮಲ್ಲಪ್ಪಾ ಧಬಾಲೆ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಓಂಕಾರ ಪಟ್ನೆ, ಗೋವಿಂದರಾವ ಸೋಮೋಶಿ, ಚಂದ್ರಕಾಂತ್ ಡೇಟ್ನೆ, ಗ್ರಾಮ ಪಂಚಾಯತಿ ಸದಸ್ಯ ನಾಗೇಶ್ ಮೇತ್ರೆ, ದೇವೇಂದ್ರ ಪವಾರ, ಜಗದೀಶ ದೇಟ್ನೆ, ವಿದ್ಯಾಸಾಗರ ಬಣಸೋಡೇ, ಪಿಕೆಪಿಎಸ್ ಸದಸ್ಯೆ ರೂಪವತಿ ಜಾಧವ , ಅರವಿಂದ ಹರಪಲ್ಲೆ ,ಸೇರಿ ಹಲವಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ: ಹುಲಸೂರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದರಿಂದ ಗುರುವಾರ ಪಟ್ಟಣದ ಗಾಂಧಿ ವೃತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ವಿವೇಕ ಚಳಕಾಪುರೆ ಮಾತನಾಡಿ, ‘ಪಟ್ಟಣ ಪಂಚಾಯತಿಯಾಗಿ ಮಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಕೃತಜ್ಞತೆ’ ಎಂದರು.
ಪ್ರಮುಖರಾದ ಲತಾ ಹಾರಕೂಡೆ, ಸಿದ್ರಾಮ ಕಾಮಣ್ಣ, ಮನ್ಸೂರ ದಾವಲಜಿ, ಶಿವು ಶಟಕಾರ, ಪರಮೇಶ್ ಗಿಲ್ಕೆ, ಸಂತೋಷ್ ಗುತ್ತೇದಾರ, ತಿಂಬಕ್ ಜೀವಾಯಿ, ಗುಲಾಂ ಬಡಾಯಿ, ವಿನಾಯಕ ಪವಾರ, ಅಬ್ರಾರ ಸೌಧಗಾರ ಸೇರಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
‘ಹುಲಸೂರ ಗ್ರಾಮ ಪಂಚಾಯಿತಿಯನ್ನು ಕಾಂಗ್ರೆಸ್ ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆದೆ ಏರಿಸಿದೆ. ಇದು ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ’ ಎಂದು ಮುಖಂಡ ವಿಜಯ್ ಸಿಂಗ್ ಹೇಳಿದರು. ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸಗಳನ್ನು ನಾನೇ ಮಾಡುತ್ತಿದ್ದೇನೆ ಎಂದು ಶಾಸಕ ಶರಣು ಸಲಗರ ಹೇಳಿಕೊಳ್ಳುತ್ತಿದ್ದಾರೆ. ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿದ್ದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಹೊರತು ಶಾಸಕ ಶರಣು ಸಲಗರ ಅವರಿಂದ ಅಲ್ಲ’ ಎಂದರು. ‘ಶಾಸಕ ಶರಣು ಸಲಗರ ಶ್ರೇಯಸ್ಸು ಪಡೆಯಲು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವುದು ಸರಿಯಲ್ಲ. ಹಾಗಿದ್ದರೆ ರೈತರಿಗೆ ಬೆಳೆ ಪರಿಹಾರ ಸಿಗದಿರಲು ಅವರೇ ಕಾರಣ ಎಂದು ಒಪ್ಪಿಕೊಳ್ಳಲಿ. ಕ್ಷೇತ್ರದ ಜನರ ಸಮಸ್ಯೆಗಳು ಅಗತ್ಯ ಅಭಿವೃದ್ಧಿಯ ಬಗ್ಗೆ ನಾನಾ ಯೋಜನೆಗಳು ರೂಪಿಸಿಕೊಂಡು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಕೆಲಸಗಳು ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.