ADVERTISEMENT

ಹುಲಸೂರ: ರಸ್ತೆಗೆ ಚಾಚಿದ ಗಿಡ–ಗಂಟಿ; ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 4:46 IST
Last Updated 24 ಜೂನ್ 2025, 4:46 IST
ಹುಲಸೂರ ಸಮೀಪದ ಮೇಹಕರ - ಕೊಂಗಳಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿಮುಳ್ಳು ಕಂಟಿ ಬೆಳೆದಿರುವುದು.
ಹುಲಸೂರ ಸಮೀಪದ ಮೇಹಕರ - ಕೊಂಗಳಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿಮುಳ್ಳು ಕಂಟಿ ಬೆಳೆದಿರುವುದು.   

ಹುಲಸೂರ: ಪಟ್ಟಣದ ಸೇರಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿ ಗಿಡ–ಗಂಟಿಗಳು ಬೆಳೆದು ಕೊಂಬೆಗಳು ರಸ್ತೆಗೆ ಚಾಚಿವೆ. ಇದರಿಂದ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ.

ತಾಲ್ಲೂಕು ಕೇಂದ್ರದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪೈಕಿ ಬಹುತೇಕ ಕಡೆ ಎರಡೂ ಬದಿಗೆ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದಿವೆ. ಅಳವಾಯಿ, ಮೇಹಕರ, ವಾಂಝರಖೆಡಾ, ಸಾಯಗಾಂವ ಮಾರ್ಗವಾಗಿ ಹುಲಸೂರ ಪಟ್ಟಣಕ್ಕೆ ಬರುವ ರಸ್ತೆ, ಹುಲಸೂರಿನಿಂದ ಕೊಂಗಳಿ ಗ್ರಾಮಕ್ಕೆ ಹೋಗುವ ರಸ್ತೆ, ಹುಲಸೂರಿನಿಂದ ದೇವನಾಳ ಮಾರ್ಗವಾಗಿ ಮಾಚನಾಳ ಹೋಗುವ ರಸ್ತೆ, ಹಾಲಹಳ್ಳಿ ಗ್ರಾಮದಿಂದ ಹುಲಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಶ್ರಿಮಾಳಿಯಿಂದ ಮೇಹಕರ ಮಾರ್ಗವಾಗಿ ಕೆಸರಜವಳಗಾ ಗ್ರಾಮಕ್ಕೆ ಹೋಗುವ ರಸ್ತೆಗಳ ಎರಡೂ ಬದಿಗೆ ಹುಲುಸಾಗಿ ಬೆಳೆದಿರುವ ಗಿಡಗಂಟಿ, ಮುಳ್ಳುಗಂಟಿಗಳಿಂದ ಪ್ರಯಾಣಿಕರು ತೊಂದರೆ ಎದುರಿಸುತ್ತಿದ್ದಾರೆ.

‘ಗಿಡ–ಗಂಟಿ ಬೆಳೆದ ಕಾರಣ ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಅಪಘಾತಗಳು ಸಹಜ ಎಂಬಂತಾಗಿದೆ’ ಎಂಬುದು ಬೈಕ್ ಸವಾರರು ಹೇಳುತ್ತಾರೆ.

ADVERTISEMENT

‘ರಸ್ತೆ ಬದಿ ಹುಲ್ಲು ಬೆಳೆದಿದ್ದರಿಂದ ರಸ್ತೆಗಳು ಕಿರು ರಸ್ತೆಗಳಂತಾಗಿವೆ. ನಿತ್ಯವೂ ಸಂಚರಿಸುವ ಚಾಲಕರಿಗೆ ಆ ಹಾದಿ ಗೊತ್ತಿರುತ್ತದೆ. ಅಪರೂಪಕ್ಕೆ ಬರುವ ಚಾಲಕರು ಗೊಂದಲಕ್ಕೀಡಾಗುತ್ತಾರೆ. ಒಮ್ಮೊಮ್ಮೆ ಎದುರಿನ ವಾಹನಗಳ ಬಗ್ಗೆ ತಿಳಿಯದೇ, ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು. ರಸ್ತೆ ಬದಿ ಜಂಗಲ್‌ ಕಟಾವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂಬುದು ಎಪಿಎಂಸಿ ಮಾಜಿ ಅಧ್ಯಕ್ಷ ಅಶೋಕ ಪಾಟೀಲ ಆರೋಪ.

‘ರಸ್ತೆಗಳು ಸಾರ್ವಜನಿಕ ಆಸ್ತಿಗಳು. ಅವುಗಳು ವ್ಯವಸ್ತಿತವಾಗಿ ಇರುವಂತೆ ನೋಡಿಕೊಳ್ಳಬೇಕಾದದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಕರ್ತವ್ಯ. ತಕ್ಷಣವೇ ರಸ್ತೆ ಪಕ್ಕದ ಹುಲ್ಲು, ಮುಳ್ಳು ಕಂಟಿಗಳು ತೆಗೆದು ಶುಚಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಥ ಬಗದುರೆ ಆಗ್ರಹಿಸಿದ್ದಾರೆ.

ವಾಹನ ಸವಾರರ ಪ್ರಾಣಕ್ಕೆ ಕಂಟಕ ರಸ್ತೆಯ ಎರಡೂ ಬದಿ ಬೆಳೆದ ಮುಳ್ಳುಕಂಟಿ ಕ್ರಮ ವಹಿಸಲು ಸ್ಥಳೀಯರ ಒತ್ತಾಯ ಸಾರ್ವಜನಿಕರ ಕರೆ ಸ್ವೀಕರಿಸದ ಅಧಿಕಾರಿಗಳು ಧಿಕಾರಿಗಳ ನಿರ್ಲಕ್ಷ್ಯ: ತಿರುವು ಕಾಣದೇ ಸವಾರರು ಹೈರಾಣ
ಗ್ರಾಮೀಣ ಭಾಗದ ರಸ್ತೆಗಳ ಪಕ್ಕ ಬೆಳೆದ ಗಿಡಗಂಟಿ ತೆರವಿಗೆ ಕ್ರಮವಹಿಸಲಾಗುವುದು. ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು
ಸೋಮಶೇಖರ ಕಾಮಶೆಟ್ಟಿ ಇಇ ಲೋಕೋಪಯೋಗಿ ಇಲಾಖೆ ಬೀದರ್

ರಸ್ತೆ ಬದಿ ಕಟ್ಟಡ ತ್ಯಾಜ್ಯ...

ಇನ್ನು ಹುಲಸೂರ ಪಟ್ಟಣದ ರಸ್ತೆಗಳ ಪಕ್ಕದಲ್ಲಿ ಹಳೆಯ ಕಟ್ಟಡದ ತ್ಯಾಜ್ಯ ತಂದು ಸುರಿಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಬೀದರ್‌-ಲಾತೂರ್‌ ರಾಷ್ಟ್ರೀಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ಹೊಂದಿರುವ ಗ್ರಾಮದಿಂದ ಮುಂದಕ್ಕೆ ಹೋದರೆ ರಸ್ತೆ ಪಕ್ಕ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ‘ವಿವಿಧ ಗ್ರಾಮಗಳಲ್ಲಿ ಅನಧಿಕೃತ ಟೀ ಅಂಗಡಿ ಹಣ್ಣು ಮಾರಾಟದ ಅಂಗಡಿಗಳು ತಲೆ ಎತ್ತಿವೆ. ಈ ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಉಳಿದ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತದೆ. ಅಪಾಯ ಸಂಭವಿಸಿದರೆ ಯಾರು ಹೊಣೆ’ ಎಂಬುದು ನಾಗರಿಕರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.