ಹುಲಸೂರ: ಜನಪ್ರತಿನಿಧಿಗಳು, ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಪ್ರೋತ್ಸಾಹ ನೀಡುವಲ್ಲಿ ದಾನಿಗಳ ನಿರಾಸಕ್ತಿ, ನಿರ್ವಹಣೆ ಕೊರತೆಯಿಂದ ಪಟ್ಟಣದ ಸ್ಮಶಾನ ಭೂಮಿ ಅವ್ಯವಸ್ಥೆ ಆಗರವಾಗಿದೆ.
ಪಟ್ಟಣದ ಹೊರವಲಯದಲ್ಲಿರುವ ಜಮಖಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಮಂಗಣಹಳ್ಳ ಸ್ಮಶಾನವು ಎಲ್ಲೆಂದರಲ್ಲಿ ಕಸ, ಕಾಲಿಟ್ಟರೆ ಮುಳ್ಳು ಚುಚ್ಚುವ ಆತಂಕ, ಶವ ಸುಡುವ ಜಾಗ ಕಸ ತುಂಬುವ ತೊಟ್ಟಿಯಾಗಿ ಪರಿಣಮಿಸಿದೆ. ಸ್ಮಶಾನದ ಪಕ್ಕ ಕಸ ಹಾಗೂ ಪ್ರಾಣಿಗಳ ಕಳೇಬರ ಎಸೆಯುತ್ತಿದ್ದು, ಬೀಡಾಡಿ ದನಗಳು, ಹಂದಿಗಳ ಹಾವಳಿ ಹೆಚ್ಚಾಗಿವೆ. ಆಳೆತ್ತರ ಮಟ್ಟಕ್ಕೆ ಬೆಳೆದಿರುವ ಜಾಲಿ ಗಿಡಗಳು, ಕಳೆಗಳಿಂದಾಗಿ ಹೆಚ್ಚಾಗಿ ಹಾವು ಚೇಳುಗಳು ಕಾಣಿಸಿಕೊಳ್ಳುತ್ತವೆ.
ಖಾಸಗಿ ವ್ಯಕ್ತಿಯೊಬ್ಬರು ಸ್ಮಶಾನಕ್ಕೆ 1.20 ಎಕರೆ ಭೂಮಿ ದಾನ ಮಾಡಿದ್ದು , ಜಾಗ ಯಾರಿಗೂ ಬೇಡವಾದ ಪಾಪದ ಕೂಸು ಎಂಬಂತಿದೆ. ಮೋಕ್ಷಧಾಮದ ಉಳಿವು ಮತ್ತು ಅಭಿವೃದ್ಧಿಗೆ ಕೈ ಜೋಡಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
‘ಶವ ಸಂಸ್ಕಾರಕ್ಕೆ ಯಾವುದೇ ಸೌಲಭ್ಯ ಇಲ್ಲದೆ ಎಲ್ಲದನ್ನೂ ಹೊರಗಿನಿಂದಲೇ ಜನರೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕೆಲವೊಮ್ಮೆ ಕತ್ತಲೆಯಲ್ಲಿಯೇ ಶವಸಂಸ್ಕಾರ ಮಾಡುವ ಪರಿಸ್ಥಿತಿಯೂ ಬರುತ್ತಿದೆ. ಸ್ಮಶಾನ ನಿರ್ವಹಣೆಗೆ ಸಿಬ್ಬಂದಿ ನೇಮಿಸುವ ಕೆಲಸವನ್ನೂ ಗ್ರಾ.ಪಂ ಮಾಡುತ್ತಿಲ್ಲ. ಯಾರಾದರೂ ಸತ್ತರೆ ಸ್ಮಶಾನದಲ್ಲಿ ಹೊಸ ಗುಂಡಿ ತೋಡಲು ₹ 2,000 ದಿಂದ ₹ 4,000 ದವರೆಗೂ ಹಣ ಕೊಡಬೇಕು ಹಾಗೂ ಹಳೇ ಗುಂಡಿಗೆ ₹ 1,500 ಕೊಡಬೇಕು’ ಎಂದು ಸ್ಥಳೀಯರಾದ ಶಂಕರ ಗೌಡಗಾಂವೇ ಹೇಳುತ್ತಾರೆ.
‘ತುರ್ತಾಗಿ ಮೋಕ್ಷಧಾಮದ ಸುತ್ತಲೂ ಪರಿಪೂರ್ಣ ರೀತಿಯಲ್ಲಿ ಕಾಂಪೌಂಡ್ ನಿರ್ಮಿಸಬೇಕು. ವಿದ್ಯುತ್ ದೀಪಗಳು ಎಲ್ಲೂ ಅಳವಡಿಸಿಲ್ಲ. ಬಿಸಿಲು ಮಳೆ ಬಂದರೆ ಕನಿಷ್ಠ ನಿಲ್ಲಲು ವ್ಯವಸ್ಥೆಯನ್ನು ಯಾವ ಸ್ಮಶಾನದಲ್ಲೂ ಮಾಡಿಲ್ಲ. ಸ್ಮಶಾನಗಳಿಗೆ ಸರಿಯಾದ ರಸ್ತೆಗಳೂ ಇಲ್ಲ. ಶವ ಸಾಗಿಸುವಾಗ ಕಚ್ಚಾ ರಸ್ತೆಯಲ್ಲೇ ಸಾಗಬೇಕು. ಶವಸಂಸ್ಕಾರಕ್ಕೆ ಚಾವಣಿ ಸಹಿತ ದಹನ ಕಟ್ಟೆ ನಿರ್ಮಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ. ಮೋಕ್ಷಧಾಮದ ಒಳಗೆ ಸ್ವಚ್ಚತೆ ಕಾಪಾಡಬೇಕು, ಮಹಿಳಾ ಶೌಚಾಲಯವನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು’ ಎನ್ನುತ್ತಾರೆ ರೋಹಿತ ಮಂಗಾ.
ಪಟ್ಟಣದ ಸ್ಮಶಾನ ಭೂಮಿಯಲ್ಲಿ ನರೇಗಾದಡಿ ಕಾಂಪೌಂಡ್ ವ್ಯವಸ್ಥೆ ಸಸಿಗಳ ಪೋಷಣೆ ಸ್ಮಶಾನದ ನಾಮಫಲಕ ವ್ಯವಸ್ಥೆ ಸೇರಿ ಅಭಿವೃದ್ಧಿಗೆ ಪಿಡಿಒಗೆ ಸೂಚಿಸುತ್ತೇನೆಮಹದೇವ ಜಮ್ಮು ಇಒ ತಾ.ಪಂ. ಹುಲಸೂರ
ಹುಲಸೂರ ಪಟ್ಟಣದಲ್ಲಿ 18 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಇದಕ್ಕೆ ಅನುಗುಣವಾಗಿ ಸ್ಮಶಾನದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕುಸಚಿನ ಕವಟೇ ಕಸಾಪ ನಗರ ಘಟಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.