ಮಳೆ ನೀರಿನೊಂದಿಗೆ ಬಂದ ಹೊಲಸು ನೀರು ಗುಮ್ಮೆ ಕಾಲೊನಿಯ ಮನೆಗಳ ನಡುವೆ ಸಂಗ್ರಹಗೊಂಡಿರುವುದು
ಬೀದರ್: ನಗರದ ಮನ್ನಳ್ಳಿ ರಸ್ತೆಯ ಬಿ.ವಿ.ಬಿ ಕಾಲೇಜು ಎದುರಿನ ಗುಮ್ಮೆ ಕಾಲೊನಿಗೆ ಶೌಚಾಲಯದ ನೀರಿನೊಂದಿಗೆ ಶವಗಳ ಮೂಳೆಗಳು ಹರಿದು ಬರುತ್ತಿದ್ದು, ಜನರು ಅಕ್ಷರಶಃ ನೆಮ್ಮದಿ ಕಳೆದುಕೊಂಡಿದ್ದಾರೆ.
ನಗರದ 30ನೇ ವಾರ್ಡ್ ವ್ಯಾಪ್ತಿಗೆ ಬರುವ ಗುಮ್ಮೆ ಕಾಲೊನಿ ತಗ್ಗು ಪ್ರದೇಶದಲ್ಲಿದೆ. ಎತ್ತರದ ಪ್ರದೇಶದಲ್ಲಿ ಮಾಲ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಇತರೆ ಮಳಿಗೆಗಳಿವೆ. ಅವುಗಳ ಶೌಚಾಲಯದ ನೀರು ನೇರವಾಗಿ ಕಾಲೊನಿಗೆ ಹರಿದು ಬರುತ್ತಿದೆ.
ಕಾಲೊನಿಗೆ ಹೊಂದಿಕೊಂಡಂತೆ ಸಾರ್ವಜನಿಕ ಸ್ಮಶಾನ ಭೂಮಿ ಕೂಡ ಇದೆ. ಇದು ನಗರದಲ್ಲಿ ಅಂತ್ಯಕ್ರಿಯೆಗೆ ಇರುವ ಅತಿದೊಡ್ಡ ಜಾಗ. ಇಲ್ಲಿ ನಿತ್ಯ ಶವಗಳನ್ನು ಹೂಳುವುದು, ಸುಡುವುದು ನಡೆಯುತ್ತದೆ. ಜೋರು ಮಳೆ ಬಂದರೆ ಶೌಚಾಲಯದ ನೀರಿನೊಂದಿಗೆ ಮೂಳೆಗಳು ಹರಿದು ಹೋಗುತ್ತಿವೆ. ಸತತ ಮಳೆಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಕಾಲೊನಿಯ ಸುಮಾರು 50ರಿಂದ 60 ಮನೆಗಳಿಗೆ ಈ ನೀರಿನಿಂದ ಸಮಸ್ಯೆಯಾಗುತ್ತಿದೆ. ಹೊಲಸು ನೀರು ಅಂತರ್ಜಲ ಕಲುಷಿತಗೊಳಿಸಿದೆ. ಬಾವಿಗಳ ನೀರೆಲ್ಲ ಕಲುಷಿತಗೊಂಡು ದುರ್ಗಂಧ ಹರಡಿದೆ. ಸ್ಥಳೀಯರು ಜನ ಹಾಗೂ ಜಾನುವಾರುಗಳಿಗೆ ಆ ನೀರು ಉಪಯೋಗಿಸುತ್ತಿಲ್ಲ. ದುಡ್ಡು ಕೊಟ್ಟು ನೀರು ಖರೀದಿಸಿ, ಕುಡಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಈ ವಾರ್ಡ್ ಪ್ರತಿನಿಧಿಸುವ ಲಕ್ಷ್ಮಿಬಾಯಿ ಶಂಕರೆಪ್ಪ ಹಂಗರಗಿ ಅವರು ಬೀದರ್ ನಗರಸಭೆ (ಈಗ ಮಹಾನಗರ ಪಾಲಿಕೆ) ಉಪಾಧ್ಯಕ್ಷೆಯೂ ಹೌದು. ಸಮಸ್ಯೆ ಕುರಿತು ಸ್ಥಳೀಯರು ಲಕ್ಷ್ಮಿಬಾಯಿ, ಜಿಲ್ಲಾಧಿಕಾರಿ, ಪೌರಾಯುಕ್ತರು ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಿ, ಗೋಳು ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ‘ಯಾರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಸಂಬಂಧ ‘ಪ್ರಜಾವಾಣಿ’ ಪೌರಾಯುಕ್ತ ಶಿವರಾಜ ರಾಠೋಡ್ ಅವರಿಗೆ ಹಲವು ಸಲ ಸಂಪರ್ಕಿಸಿದರೂ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಮಾಲ್‌ನವರು ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ದೊಡ್ಡದಾದ ಗುಂಡಿ ಅಗೆದು ಅದಕ್ಕೆ ಹೊಲಸು ನೀರು ಬಿಡುತ್ತಿದ್ದಾರೆ. ಆ ನೀರೆಲ್ಲ ಗುಮ್ಮೆ ಕಾಲೊನಿಗೆ ಬರುತ್ತಿದೆ. ಇದರಿಂದ ನಮ್ಮ ನೆಮ್ಮದಿ ಹಾಳಾಗಿದೆಎಸ್.ಕೆ. ಸಾಥಿ ಸ್ಥಳೀಯ ನಿವಾಸಿ
ನಮ್ಮದು ಸೇರಿ ಕಾಲೊನಿಯ ಅನೇಕರ ಬಾವಿ ನೀರು ಕಲುಷಿತಗೊಂಡಿದೆ. ನಲ್ಲಿಗೂ ನೀರು ಬಿಡುತ್ತಿಲ್ಲ. ದುಡ್ಡು ಕೊಟ್ಟು ಹೊರಗಿನಿಂದ ನೀರು ತರುತ್ತಿದ್ದೇವೆ. ದುರ್ಗಂಧದಿಂದ ಮನೆಯಲ್ಲಿ ಇರಲಾಗುತ್ತಿಲ್ಲಜಗದೇವಿ ಸ್ಥಳೀಯ ನಿವಾಸಿ
ಸತತ ಮಳೆ ಸುರಿಯುತ್ತಿರುವುದರಿಂದ ಹೊಲಸು ನೀರು ಹೆಚ್ಚಿನ ಪ್ರಮಾಣದಲ್ಲಿ ಕಾಲೊನಿಗೆ ಹರಿದು ಬರುತ್ತಿದೆ. ವರ್ಷವಿಡೀ ಹೀಗೆ ಆಗುತ್ತಿರುತ್ತದೆ. ಆದರೆ, ಮಳೆಗಾಲದಲ್ಲಿ ಇದರ ಪ್ರಮಾಣ ಹೆಚ್ಚುಸಂಗಮೇಶ ಬಿರಾದಾರ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.