ಹುಮನಾಬಾದ್: ‘ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಚುನಾವಣೆ ಅಕ್ರಮವಾಗಿ ನಡೆದಿದೆ’ ಎಂದು ಆರೋಪಿಸಿ ಸರ್ಕಾರಿ ನೌಕರರು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರ, ‘ಸರ್ಕಾರಿ ನೌಕರರ ಚುನಾವಣೆ ಸಂಪೂರ್ಣ ಅಕ್ರಮದಿಂದ ನಡೆದಿದೆ. ಚುನಾವಣಾಧಿಕಾರಿಗಳು ದಿ. 11ರಿಂದ 18 ವರೆಗೆ ಯಾವುದೇ ನಾಮಪತ್ರ ಸ್ವೀಕರಿಸದೆ ಕಚೇರಿ ಬಂದ್ ಮಾಡಿದ್ದರು. ಇದರಿಂದ ಅನೇಕ ಸರ್ಕಾರಿ ನೌಕರರು ನಾಮಪತ್ರ ಸಲ್ಲಿಕೆಯಿಂದ ವಂಚಿತರಾಗಿದ್ದರು. ಆದರೆ ಈಚೆಗೆ ಸಹ ಚುನಾವಣಾ ಅಧಿಕಾರಿ ಮಾರುತಿ ಪೂಜಾರಿ ಅವರು ಏಕಾಏಕಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಪ್ರಮಾಣ ಪತ್ರ ವಿತರಿಸಿ ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ನ್ಯಾಯಾಲಯ ಮೊರೆ ಹೋಗಲಾಗಿದೆ’ ಎಂದರು.
ಶರದಕುಮಾರ ನಾರಾಯಣಪೇಟಕರ್ ಮಾತನಾಡಿ, ‘ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗಶೆಟ್ಟಿ ಡುಮಣಿ ಅವರು ಸರ್ಕಾರಿ ನೌಕರರ ಹೆಸರಿನಲ್ಲಿ ಅಕ್ರಮ ಮತದಾರರ ಪಟ್ಟಿ ತಯಾರಿಸಿಕೊಂಡಿದ್ದಾರೆ. ತಮಗೆ ಬೇಕಾದವರಿಂದ ನಾಮಪತ್ರ ಸಲ್ಲಿಕೆ ಮಾಡಿಕೊಂಡು ವಾಮಮಾರ್ಗದಿಂದ ಏಕಾಏಕಿ ಅಭ್ಯರ್ಥಿಗಳ ಆಯ್ಕೆ ಮಾಡಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಅನ್ಯಾಯ ಸರಿಪಡಿಸಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜ ಅರಸ್, ಪಿಡಿಒ ಮಲ್ಲಿಕಾರ್ಜುನ, ಪಶು ವೈದ್ಯಾಧಿಕಾರಿ ಡಾ. ಶಾಂತಕುಮಾರ ಸಿದ್ಧೇಶ್ವರ, ಮುರುಘೇಂದ್ರ ಸಜ್ಜನಶಟ್ಟಿ, ವೀರಣ್ಣ ಪಂಚಾಳ, ಶಿವರಾಜ ಮೇತ್ರೆ, ಲೋಕೇಶ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.