
ಹುಮನಾಬಾದ್: ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿ ನಿರತರಾಗಿದ್ದ ಮೋಳಕೇರಾ ಗ್ರಾಮಸ್ಥರಿಗೆ ಶನಿವಾರ ಬೆಳಗಿನ ಜಾವ ಸಂಭವಿಸಿದ ಭಾರಿ ಸ್ಫೋಟ ಶಬ್ದಕ್ಕೆ ಆತಂಕಕ್ಕೆ ಕಾರಣವಾಯಿತು.
ಗ್ರಾಮದ ಮೋಳಿಗೆ ಮಾರಯ್ಯನವರ ದೇವಸ್ಥಾನ ಎದುರಿನ ರಸ್ತೆಯ ಜನವಸತಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟದ ಶಬ್ದ ಕೇಳಿದ ಜನತೆ ಭಯಭೀತರಾಗಿ ಏನು ನಡೆದಿದೆ ಎಂದು ಘಟನಾ ಸ್ಥಳಕ್ಕೆ ಧಾವಿಸಿದರು. ಈ ಸಂದರ್ಭದಲ್ಲಿ ಸ್ಫೋಟದಿಂದ ತೀವ್ರ ಗಾಯಗೊಂಡವರನ್ನು ಕಂಡು ಮತ್ತಷ್ಟು ಭಯಭೀತರಾಗಿಸಿತು. ಗಾಯಾಳುಗಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಸಾರ್ವಜನಿಕರ ಸಹಕಾರದಿಂದ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಘಟನಾ ಸ್ಥಳದಲ್ಲಿನ ಸನ್ನಿವೇಶ ಸ್ಪೋಟದ ಭೀಕರತೆಗೆ ಹಿಡಿದ ಕನ್ನಡಿಯಂತಿತ್ತು. ಘಟನಾ ಸ್ಥಳದಲ್ಲಿ ಗಾಯಾಳುಗಳ ಚಪ್ಪಲಿ, ಅಲ್ಲಿಂದ ಬ್ಯಾರಲ್ ಸೇರಿದಂತೆ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಒಂದೆಡೆಯಾದರೆ ಗಾಯಾಳುಗಳ ಕೈ ಬೆರಳುಗಳು ತುಂಡಾಗಿ ಸುಮಾರು ನೂರು ಅಡಿ ದೂರ ಬಿದ್ದಿರುವುದು ಕಂಡು ಬಂದಿದೆ. ಈ ಹಿಂದೆ ನಾಲ್ಕೈದು ಬಾರಿ ಇದೇ ಸ್ಥಳದಲ್ಲಿ ಸ್ಪೋಟ ಘಟನೆ ನಡೆದಿತ್ತು. ಹೀಗಾಗಿ ಮೊದಲಿನಿಂದಲೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಸದ್ಯ ಈ ಸ್ಪೋಟದ ಸ್ಥಳವನ್ನೂ ಸಂಪೂರ್ಣ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಲಬುರಗಿ ಪೊಲೀಸ್ ಆಯುಕ್ತ ಶಾಂತಕುಮಾರ ಸಿನ್ಹಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳ, ಬೆರಳಚ್ಚು ತಜ್ಞರು, ಶ್ವಾನ ದಳ, ಸೋಕೋ ದಳ, ಆರೋಗ್ಯ ಇಲಾಖೆ, ಜೆಸ್ಕಾಂ ಇಲಾಖೆ ಅವರಿಂದ ತನಿಖೆ ನಡೆದಿದೆ.
ಈ ಸಂದರ್ಭದಲ್ಲಿ ಎಸಿ ಪ್ರಕಾಶ್ ಕುದರಿ, ತಹಶೀಲ್ದಾರ್ ಅಂಜುಂ ತಬಸುಮ್, ಡಿವೈಎಸ್ಪಿ ಮಡೋಳಪ್ಪ, ತಾಪಂ ಇಒ ದೀಪಿಕಾ ನಾಯ್ಕರ್, ಸಿಪಿಐಗಳಾದ ಸಂತೋಷ್, ಶ್ರೀನಿವಾಸ ಅಲ್ಲಾಪುಲೆ, ಅಲಿಸಾಬ್, ಪಿಎಸ್ಐಗಳಾದ ಸುರೇಶ್ ಚೌಹಾಣ್, ಬಸವಲಿಂಗಪ್ಪ, ಹುಲೇಪ್ಪ, ಮಹೇಂದ್ರ ಕುಮಾರ್, ಪಿಡಿಒ ಜಗದೇವಿ ಹನುಮಂತ ಸೇರಿದಂತೆ ಇತರರು ಇದ್ದರು.
ಶಾಸಕ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ಜಿ.ಪಂ ಮಾಜಿ ಸದಸ್ಯ ಗುಂಡು ರೆಡ್ಡಿ ಕಮಲಾಪುರೆ, ಸುನೀಲ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.