ADVERTISEMENT

ಹುಮನಾಬಾದ್: ಹೆಚ್ಚಿದ ಮಂಜು; ತೊಗರಿಗೆ ಕೀಟಬಾಧೆ

ರೈತರಲ್ಲಿ ಇಳುವರಿ ಕುಂಠಿತದ ಆತಂಕ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:12 IST
Last Updated 21 ನವೆಂಬರ್ 2025, 7:12 IST
ಹುಮನಾಬಾದ್ ತಾಲ್ಲೂಕಿನ ಹಂದಿಕೇರಾ ಗ್ರಾಮದ ಹೊಲವೊಂದರಲ್ಲಿನ ತೊಗರಿ ಬೆಳೆಯಲ್ಲಿ ಕಂಡ ಕೀಟ
ಹುಮನಾಬಾದ್ ತಾಲ್ಲೂಕಿನ ಹಂದಿಕೇರಾ ಗ್ರಾಮದ ಹೊಲವೊಂದರಲ್ಲಿನ ತೊಗರಿ ಬೆಳೆಯಲ್ಲಿ ಕಂಡ ಕೀಟ   

ಹುಮನಾಬಾದ್: ಪ್ರಸಕ್ತ ಮುಂಗಾರು ಬೆಳೆಗಳಲ್ಲಿ ತೊಗರಿಯಾದರೂ ಸ್ವಲ್ಪ ಮಟ್ಟಿಗೆ ಕೈ ಹಿಡಿಯಬಹುದು ಎಂಬ ಆಶಯಲ್ಲಿದ್ದ ರೈತ ವರ್ಗಕ್ಕೆ ಇದೀಗ ಮಂಜಿನ ಕಾಟ ಶುರುವಾಗಿದೆ. 

ಈ ಬಾರಿಯ ಮುಂಗಾರು ಆರಂಭ ಹಿಂಗಾರು ಹಂಗಾಮಿನ ವರೆಗೂ ಸುರಿದ ಮಳೆಗೆ ಸೋಯಾ, ಉದ್ದು, ಹೆಸರು ಬೆಳೆಗಳ ಸಂಪೂರ್ಣವಾಗಿ ಕಳೆದುಕೊಂಡ ರೈತರು ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲೇ ವಿಪರೀತ ಮಂಜು ಮತ್ತು ಮೋಡಕವಿದ ವಾತಾವರಣದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಗಾಗಲೇ ಗಿಡಗಳಲ್ಲಿ ಹೂ ಮೂಡಿದ್ಡು ಇನ್ನೂ ಅರ್ಧದಷ್ಟು ಕಾಯಿಗಳು ಕಟ್ಟುವ ಹಂತಕ್ಕೆ ಬಂದಿದೆ. ಆದರೆ ಕಳೆದ ಮೂರ್ನಾಲ್ಕು ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಈಚೆಗೆ ಸುರಿದ ಮಳೆಯಿಂದ ಕಾಯಿಕೊರಕ ಕೀಟಬಾಧೆ ಹರಡುವ ಭೀತಿಯಿಂದ ಹೆಚ್ಚಾಗಿದೆ. 

ADVERTISEMENT

ತಾಲ್ಲೂಕಿನ ಹುಡಗಿ, ಹಳಿಖೇಡ್(ಬಿ), ಮದರಗಾಂವ, ನಂದಗಾಂವ, ಹಳಿಖೇಡ್ (ಕೆ). ಘಾಟಬೋರಾಳ್, ಘೋಡವಾಡಿ ಹಾಗೂ ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಬೇಮಳಖೆಡಾ, ಚಾಂಗಲೇರಾ, ಮನ್ನಾಏಖೇಳ್ಳಿ ಸೇರಿ 30 ಗ್ರಾಮಗಳಲ್ಲಿ ಈ ವರ್ಷ ಬಹುತೇಕ ಜಮೀನುಗಳಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷ ಉತ್ತಮ ಆದಾಯ ಪಡೆದಿದ್ದ ರೈತರಿಗೆ ಈ ಸಲವೂ ಅದೇ ನಿರೀಕ್ಷೆಯಲ್ಲಿದ್ದಾರೆ. ‘ಕಳೆದ ಒಂದು ವಾರದಿಂದ ತೊಗರಿ ಬೆಳೆಗೆ ಪ್ರತಿಕೂಲ ವಾತಾವರಣದಿಂದಾಗಿ ಕಾಯಿಕೊರಕ ಕೀಟಗಳು ಹೆಚ್ಚಾಗಿದೆ. ಎಲೆ, ಹೂವು ಹಾಗೂ ಕಾಯಿಗಳಲ್ಲಿ ತತ್ತಿ ಇಟ್ಟು ಗೂಡು ಕಟ್ಟಿ ಬೆಳೆಹಾನಿ ಸಂಭವಿಸಿ ಇಳುವರಿ ಕಡಿಮೆ ಬರಲಿದೆ’ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ಕಳೆದ ವರ್ಷ ಮಳೆ ಕೊರತೆಯಿಂದ ಒಂದು ಎಕರೆಗೆ 4ರಿಂದ 5 ಕ್ವಿಂಟಲ್ ಇಳುವರಿ ಬಂದಿತ್ತು. ಆದರೆ ಉತ್ತಮ ಮಳೆಯಿಂದ 8ರಿಂದ 9 ಕ್ವಿಂಟಲ್ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹12 ಸಾವಿರದಿಂದ ₹15 ಸಾವಿರದಂತೆ  ಮಾರಾಟವಾದರೆ ಮಾಡಿದ ಖರ್ಚು ಹೋಗಿ ಸ್ವಲ್ಪ ಉಳಿತಾಯ ಮಾಡಬಹುದು ಎಂದು ರೈತ ಕರಬಸಪ್ಪ ಹೇಳಿದರು.

ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ಹೊಲದಲ್ಲಿನ ತೊಗರಿಗೆ ತಗುಲಿರುವ ಕೀಟಬಾಧೆಯನ್ನು ಕೃಷಿ ಜಂಟಿ ನಿರ್ದೇಶಕಿ ದೇಲಿಕಾ ಪರೀಶೀಲನೆ ಮಾಡಿದರು. ಹುಮನಾಬಾದ್ ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ ಇದ್ದರು
ಮೋಡದ ವಾತಾವರಣ ಮತ್ತು ಮಂಜಿನಿಂದ ತೊಗರಿಗೆ ಕೀಟಬಾಧೆ ಹೆಚ್ಚುತ್ತದೆ. ತತ್ತಿನಾಶಕ ಓವಿಸೈಡ್ ರಾಸಾಯನಿಕ ಪ್ರೊಫೆನೊಫಾಸ್ ಸಣ್ಣ ಕೀಟಗಳು ಇದ್ದರೆ ಎಮಾಮೆಕ್ಟಿನ್ ಬೆಂಜೊಯೇಟ್ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು.
– ಶರಣಕುಮಾರ, ಸಹಾಯಕ ಕೃಷಿ ನಿರ್ದೇಶಕ ಹುಮನಾಬಾದ್
ಸಾಕಷ್ಟು ಖರ್ಚು ಮಾಡಿ ಉತ್ತಮವಾಗಿ ತೊಗರಿ ಬೆಳೆಸಲಾಗಿದೆ. ಈ ಬಾರಿ ಖರ್ಚು ಮಾಡಿದ ಹಣ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮೋಡಕವಿದ ವಾತಾವರಣದಿಂದ ಕೀಟಬಾಧೆ ಕಾಡುತ್ತಿದೆ.
– ಸುಧಾಕರ್ ಗಡ್ಡದೂರ್ ತಾಳಮಡಗಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.