ADVERTISEMENT

ಬೀದರ್: ರಾಷ್ಟ್ರಮಟ್ಟದ ಐಐಟಿಯಲ್ಲಿ ಚೇತನ್‌ಗೆ 28ನೇ ರ‍್ಯಾಂಕ್‌

ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ಐಐಟಿ ಪರೀಕ್ಷೆಯಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 3:02 IST
Last Updated 16 ಅಕ್ಟೋಬರ್ 2021, 3:02 IST
ಮಹಾದೇವ
ಮಹಾದೇವ   

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಪರೀಕ್ಷೆಯಲ್ಲಿ ಅಮೋಘ ಸಾಧನೆಗೈದು ಗಡಿಭಾಗದ ಕೀರ್ತಿಯನ್ನು ರಾಷ್ಟ್ರದಾದ್ಯಂತ ಪಸರಿಸಿದ್ದಾರೆ.

ವಿದ್ಯಾರ್ಥಿ ಚೇತನ ಮಲ್ಲಿಕಾರ್ಜುನ ರಾಷ್ಟ್ರಮಟ್ಟದಲ್ಲಿ 28ನೇ ರ‍್ಯಾಂಕ್‌ ಪಡೆದು ಕಾಲೇಜಿಗೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಮಹಾದೇವ ಕೌಟಾ 559, ಕೇದಾರ ಬಾಬು 1001, ಅಂಬಿಕಾ ಪಾಂಡಪ್ಪ 1005, ಪ್ರೇಮಕುಮಾರ ಶಿವಕುಮಾರ 2122, ಮಂಜುನಾಥ ಸುಭಾಷ 2131, ಶ್ರೀಧರ ರೆಡ್ಡಿ 2421, ವಿನೋದ ಸಜ್ಜನ್‌ 5514, ನಾಗರಾಜ ಹಾಲಿಮನಿ, 7777, ರೋನಕ್‌ ರಾಜಶೇಖರ 8388 ರ‍್ಯಾಂಕ್‌ ಪಡೆದು ಭಾರತದ ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಯನ್ನು ಗಿಟ್ಟಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ 28ನೇ ರ‍್ಯಾಂಕ್‌ ಪಡೆದ ಚೇತನ ಮಲ್ಲಿಕಾರ್ಜುನ ತಾಲ್ಲೂಕಿನ ಕುರುಬಖೇಳಗಿ ಗ್ರಾಮದವರಾಗಿದ್ದು, ಈ ಮುಂಚೆ ನಡೆದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 21ನೇ ರ‍್ಯಾಂಕ್‌ ಪಡೆದಿದ್ದಾರೆ.

ADVERTISEMENT

ಕಿಶೋರ ವಿಜ್ಞಾನ ಪ್ರೋತ್ಸಾಹನ ಯೋಜನೆ (ಕೆವಿಪಿವೈ) ಪರೀಕ್ಷೆಯಲ್ಲೂ ಉತ್ತೀರ್ಣನಾಗಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಮುಂಬೈ ಐಐಟಿ ಕಾಲೇಜಿನಲ್ಲಿ ಪ್ರವೇಶ ಪಡೆದು ಗಣಕ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸುವ ಯೋಜನೆ ಹೊಂದಿದ್ದಾರೆ.

ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.