
ಹುಲಸೂರ: ಪಟ್ಟಣ ಹಾಗೂ ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲಿ ಎಗ್ಗಿಲ್ಲದೇ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಜಾಣಕುರುಡರಾಗಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿನ ಪೆಟ್ಟಿಗೆ ಅಂಗಡಿ, ವಾಸದ ಮನೆಗಳು ಹಾಗೂ ಕಿರಾಣಿ -ಅಂಗಡಿಗಳಲ್ಲಿಯೂ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ. ಎಲ್ಲ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಕುಡಕರ ಹಾವಳಿಯಿಂದ ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ.
ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಬೇಲೂರ, ಗಡಿಗೌಡಗಾಂವ, ಹುಲಸೂರ, ತೊಗಲೂರ, ಮೀರಖಲ, ಮುಚಳಂಬ, ಗೋರಟಾ ಹಾಗೂ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಹೋಬಳಿಯ ಮೆಹಕರ, ಅಳವಾಯಿ, ಅಟ್ಟರಗಾ, ಹಲಸಿ ತುಗಾಂವ , ಸಾಯಗಾಂವ, ವಾಂಝರಖೇಡ ಗ್ರಾಮ ಪಂಚಾಯಿತಿ ಸೇರಿ ಅವುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ. ಕುಡಿತದ ದಾಸರಾಗಿರುವ ಕೆಲವರು ಹಳ್ಳಿಗಳಲ್ಲಿ ಸಣ್ಣಪುಟ್ಟ ಕಳವು ಮಾಡುತ್ತಿದ್ದು, ಕಳ್ಳರನ್ನು ಕಾಯುವುದೇ ಕೆಲಸವಾಗಿದೆ.
ಪರವಾನಗಿ ಇರುವ ಮದ್ಯದಂಗಡಿಗಳಲ್ಲಿ ಮಾತ್ರ ಕುಳಿತು ಮದ್ಯ ಸೇವಿಸಲು ಅವಕಾಶವಿದೆ. ಆದರೆ, ಪಟ್ಟಣದ ಒಳಗೆ ಮತ್ತು ಹೊರಭಾಗದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲ ಡಾಬಾಗಳಲ್ಲಿಯೂ ಮದ್ಯ ಸೇವನೆ ಮುಕ್ತವಾಗಿ ನಡೆಯುತ್ತಿದೆ. ಸಿಎಲ್–7 ಪರವಾನಗಿಯನ್ನು ಹೆಚ್ಚಾಗಿ ಪ್ರವಾಸಿ ತಾಣಗಳಿಗೆ ಮಾತ್ರ ನೀಡಲಾಗುತ್ತಿದ್ದು, ಲಾಡ್ಡಿಂಗ್ ಸಹ ಇರಬೇಕು. ಲಾಡ್ಡಿಂಗ್‌ನಲ್ಲಿ ವಸತಿ ಬರುವ ಗ್ರಾಹಕರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕೆನ್ನುವ ನಿಯಮವಿದೆ.
ಸಿಎಲ್–9 ಅಡಿಯಲ್ಲಿ ಬರುವ ಅಂಗಡಿಗಳಲ್ಲಿ ಊಟ ಮಾಡುವವರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕೆಂಬ ನಿಯಮ ಕಡ್ಡಾಯವಾಗಿದೆ. ಆದರೆ ತಾಲ್ಲೂಕಿನಲ್ಲಿರುವ ಯಾವ ಮದ್ಯದಂಗಡಿಗಳಲ್ಲಿಯೂ ಈ ನಿಯಮಗಳು ಪಾಲನೆ ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ಮದ್ಯ ಅಕ್ರಮ ಮಾರಾಟಕ್ಕೆ ನಿಷೇಧ ಹೇರುವ ಸರ್ಕಾರವು ಒಳಗೊಳಗೆ ಟಾರ್ಗೆಟ್ (ಗುರಿ) ನೀಡಿ ಇದಕ್ಕೆ ಸಹಕಾರವನ್ನೂ ನೀಡುತ್ತಿದೆ. ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಗೆ ನೀಡಲಾದ ಗುರಿ ತಲುಪಲು ಮಾಲೀಕರು ನಿತ್ಯ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ ಎಂಬುದು ಮಹಿಳೆಯರ ಆರೋಪವಾಗಿದೆ.
ನಿತ್ಯ ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ. ವಿಷಯ ಗೊತ್ತಿದ್ದರೂ ಸುಮ್ಮನಿರುವ ಇಲಾಖೆ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಿಅಜಿತ ಸೂರ್ಯವಂಶಿ ಲಹುಜಿ ಶಕ್ತಿ ಸೇನೆ ತಾಲ್ಲೂಕ ಅಧ್ಯಕ್ಷ
ತಾಲ್ಲೂಕಿನಾದ್ಯಂತ ಗ್ರಾಮದ ಕೆಲವು ಚಹಾ ಕಿರಾಣಿ ಅಂಗಡಿಯಲ್ಲಿ ಮದ್ಯ ಸಿಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ಕುಟುಂಬಗಳು ಹೆಚ್ಚು ಬಲಿಯಾಗಿವೆ. ಅಧಿಕಾರಿಗಳು ಸೂಕ್ತಕ್ರಮ ತೆಗೆದುಕೊಳ್ಳಬೇಕುಗಣೇಶ ಸೂರ್ಯವಂಶಿ ಕರವೇ (ಪ್ರವೀಣ ಶೆಟ್ಟಿ ಬಣ ತಾಲ್ಲೂಕು ಅಧ್ಯಕ್ಷ )
ಸಿಬ್ಬಂದಿ ಕೊರತೆ ಇದ್ದು ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಶಾಲೆ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದುಬಸವರಾಜ ಜಾಮಗೊಂಡ ಅಬಕಾರಿ ನಿರೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.