ADVERTISEMENT

ಬೇಕಾಬಿಟ್ಟಿ ಪಾರ್ಕಿಂಗ್‌ ತಂದಿಟ್ಟ ಸಂಚಾರ ಸಮಸ್ಯೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಫೆಬ್ರುವರಿ 2026, 4:26 IST
Last Updated 19 ಫೆಬ್ರುವರಿ 2026, 4:26 IST
ಬೀದರ್‌ನ ಹಾರೂರಗೇರಿ ಕಮಾನ್‌ ಎದುರು ನಿತ್ಯ ಈ ದೃಶ್ಯ ಸಾಮಾನ್ಯ. ರಸ್ತೆಯುದ್ದಕ್ಕೂ ಆಟೊಗಳು ಬೇಕಾಬಿಟ್ಟಿ ನಿಲ್ಲುವುದರಿಂದ ಬಸ್‌ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ
ಬೀದರ್‌ನ ಹಾರೂರಗೇರಿ ಕಮಾನ್‌ ಎದುರು ನಿತ್ಯ ಈ ದೃಶ್ಯ ಸಾಮಾನ್ಯ. ರಸ್ತೆಯುದ್ದಕ್ಕೂ ಆಟೊಗಳು ಬೇಕಾಬಿಟ್ಟಿ ನಿಲ್ಲುವುದರಿಂದ ಬಸ್‌ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ   

ಬೀದರ್‌: ನಗರದ ಪ್ರಮುಖ ರಸ್ತೆಗಳಲ್ಲಿಯೇ ಬೇಕಾಬಿಟ್ಟಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ರಸ್ತೆಯ ಅಂಚಿನಲ್ಲಿರುವ ಬಿಳಿ ಪಟ್ಟಿಯ ಆಚೆಗೆ ವಾಹನಗಳನ್ನು ನಿಲುಗಡೆ ಮಾಡಬೇಕು. ನಗರದ ಮೋಹನ್‌ ಮಾರ್ಕೆಟ್‌ನಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಆದರೆ, ನಗರದ ಇತರೆ ಭಾಗಗಳಲ್ಲಿ ಈ ಪರಿಸ್ಥಿತಿ ಇಲ್ಲ.

ರಸ್ತೆಯ ಅಂಚಿನ ಬಿಳಿಪಟ್ಟಿಯಲ್ಲ, ರಸ್ತೆಯ ಒಂದು ಭಾಗದುದ್ದಕ್ಕೂ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಸಾಮಾನು ಸರಂಜಾಮು, ಹಣ್ಣು, ತರಕಾರಿ ಸೇರಿದಂತೆ ಇತರೆ ವಸ್ತುಗಳ ಖರೀದಿಗೆಂದು ಜನ ವಾಹನಗಳನ್ನು ರಸ್ತೆಯ ಒಂದು ಭಾಗದಲ್ಲಿ ನಿಲ್ಲಿಸಿ ಹೋಗುತ್ತಾರೆ. ಇನ್ನು ಆಟೊಗಳಂತೂ ರಾಜಾರೋಷವಾಗಿ ರಸ್ತೆಯ ಮಧ್ಯ ಭಾಗದಲ್ಲೇ ಪ್ರಯಾಣಿಕರನ್ನು ತುಂಬಿಸಿಕೊಳ್ಳುವುದು, ಅವರನ್ನು ಇಳಿಸುವ ಕೆಲಸ ಮಾಡುತ್ತಾರೆ. ದೊಡ್ಡ ಪ್ರಮಾಣದ ವಾಹನಗಳ ಸಂಚಾರಕ್ಕೆ ಬಹಳಷ್ಟು ಅನನುಕೂಲವಾಗಿ, ವಾಹನ ದಟ್ಟಣೆ ಉಂಟಾಗಿ, ಸಂಚಾರ ಸಮಸ್ಯೆಯಾಗುತ್ತಿದೆ ಎನ್ನುವುದು ಸಾರ್ವಜನಿಕರ ದೂರು.

ADVERTISEMENT

ಪಾರ್ಕಿಂಗ್ ಕುರಿತು ಟ್ರಾಫಿಕ್‌ ಪೊಲೀಸರು ನಿಯಮಿತವಾಗಿ ‘ಪೀಕ್‌ ಅವರ್‌’ನಲ್ಲಿ ರೌಂಡ್ಸ್‌ ಹಾಕುತ್ತಿದ್ದಾರೆ. ಧ್ವನಿವರ್ಧಕಗಳ ಮೂಲಕ ಪ್ರಚಾರವೂ ಕೈಗೊಳ್ಳುತ್ತಿದ್ದಾರೆ. ಆದರೆ, ಜನ ಅದರಿಂದ ಜಾಗೃತರಾದಂತಿಲ್ಲ. ಪೊಲೀಸರಿದ್ದಾಗಲಷ್ಟೇ ನಿಯಮ ಪಾಲಿಸುತ್ತಾರೆ. ಅವರು ಅಲ್ಲಿಂದ ನಿರ್ಗಮಿಸಿದ ನಂತರ ಚರ್ವಿತ ಚರ್ವಣ.

‘ಬೀದರ್‌ ನಗರದಲ್ಲಿ ಸಾಕಷ್ಟು ಐಷಾರಾಮಿ ಕಾರುಗಳು ಬಂದಿವೆ. ಬೈಕ್‌ಗಳು ಅಷ್ಟೇ. ವಾಹನ ದಟ್ಟಣೆ ಕೂಡ ಹೆಚ್ಚಿದೆ. ಆದರೆ, ಹೆಚ್ಚಿನವರಿಗೆ ರಸ್ತೆ ನಿಯಮಗಳ ಬಗ್ಗೆ ಅರಿವೇ ಇಲ್ಲ. ಪಾರ್ಕಿಂಗ್‌ ಅಲ್ಲ, ಯಾವ ಬದಿಗೆ ಹೋಗುತ್ತಾರೆ ಆ ಕಡೆಯ ಇಂಡಿಕೇಟರ್‌ ಕೂಡ ಹಾಕುವುದಿಲ್ಲ. ಆದಕಾರಣ ಅವರಿಗೆ ಆರ್‌ಟಿಒ ಹಾಗೂ ಸಂಚಾರ ಪೊಲೀಸರು ಹೆಚ್ಚು ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸಬೇಕು. ಇಲ್ಲವಾದಲ್ಲಿ ಸುಧಾರಣೆ ಕಷ್ಟ’ ಎನ್ನುತ್ತಾರೆ ಹಿರಿಯ ನಾಗರಿಕರಾದ ಬಸವರಾಜ, ರಾಜಶೇಖರ್‌.

‘ನಿಯಮ ಉಲ್ಲಂಘಿಸಿ ಪಾರ್ಕಿಂಗ್‌ ಮಾಡುವ ವಾಹನಗಳ ಮೇಲೆ ಮುಲಾಜಿಲ್ಲದೇ ದಂಡ ಹಾಕಬೇಕು. ನಗರದ ಮನ್ನಳ್ಳಿ ರಸ್ತೆ, ಉದಗೀರ್‌ ರಸ್ತೆ, ಓಲ್ಡ್‌ ಸಿಟಿಯಲ್ಲಿ ವಾಹನ ನಿಲುಗಡೆ ಸಮರ್ಪಕವಾಗಿ ಇರುವುದಿಲ್ಲ. ಅದರತ್ತ ಪೊಲೀಸರು ಹೆಚ್ಚು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ನಿರಂತರವಾಗಿ ಗಸ್ತು ಕೂಡ ಮಾಡಲಾಗುತ್ತಿದೆ.
ರಮೇಶ್‌ ಮೈಲೂರಕರ್‌ ಪಿಐ ಬೀದರ್‌ ಟ್ರಾಫಿಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.