ADVERTISEMENT

ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ: ಸಿಐಡಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:24 IST
Last Updated 10 ಆಗಸ್ಟ್ 2022, 4:24 IST
ಪ್ರಭು ಚವಾಣ್
ಪ್ರಭು ಚವಾಣ್   

ಔರಾದ್: ‘ಪಶು ಸಂಗೋಪನಾ ಇಲಾಖೆಯಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ ನಡೆದಿದೆ. ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಮುಖಂಡ ರಾಮಣ್ಣ ಒಡೆಯರ್, ಆನಂದ ಚವಾಣ್, ಶಿವರಾಜ ದೇಶಮುಖ ಅವರು ಮಂಗಳವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ನೌಕರಿ ಕೊಡಿಸುವುದಾಗಿ ಅನೇಕ ಯುವಕರ ಬಳಿ ಹಣ ಪಡೆದು ವಂಚಿಸಲಾಗಿದೆ. ಇದರ ಹಿಂದೆ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರ ಈ ಹಿಂದಿನ ಆಪ್ತ ಸಹಾಯಕ ಬಾಗಲಕೋಟೆ ಜಿಲ್ಲೆಯ ಜ್ಞಾನದೇವ ಜಾಧವ ಇದ್ದಾರೆ. ಅವರ ವಿರುದ್ಧ ಈಗಾಗಲೇ ಬೆಂಗಳೂರಿನ ಸಂಜಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.

ಇದು ಜ್ಞಾನದೇವ ಒಬ್ಬರೇ ಮಾಡಿದ ಕೆಲಸ ಅಲ್ಲ. ಇದರಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಚಿವ ಚವಾಣ್ ಅವರ ಕೈವಾಡವೂ ಇರಬಹುದು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಬೇಕು. ತನಿಖೆ ಪೂರ್ಣ ಆಗುವ ತನಕ ಸಚಿವ ಚವಾಣ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪಶು ಸಂಗೋಪನೆ ಇಲಾಖೆಯಲ್ಲಿ ಗುಮಾಸ್ತರ ನೇಮಕಾತಿ ಮಾಡಿಕೊಳ್ಳುವುದಾಗಿ ಒಬ್ಬೊಬ್ಬರ ಬಳಿ ₹8 ರಿಂದ ₹10 ಲಕ್ಷ ವಸೂಲಿ ಮಾಡಿದ ಆರೋಪ ಇದೆ. ಇದೊಂದು ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣವಾಗಿದೆ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಒಂದು ವೇಳೆ ಪ್ರಕರಣ ಮುಚ್ಚುವುದಾಗಲಿ, ದಿಕ್ಕು ತಪ್ಪಿಸುವುದಾಗಲಿ ಆದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟದ ಮಾಡುವುದಾಗಿ ಅವರು
ಎಚ್ಚರಿಸಿದರು.

ಮುಖಂಡ ಸುಧಾಕರ್ ಕೊಳ್ಳೂರ, ಬಂಟಿ ದರಬಾರೆ ಹಾಗೂ ಅಂಜಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.