ADVERTISEMENT

ಬಸವಕಲ್ಯಾಣ: ಮುಡಬಿ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಳ

ರಸ್ತೆ ವಿಸ್ತರಣೆ, ಬಸ್‌ನಿಲ್ದಾಣಕ್ಕೆ ಆಗ್ರಹ

ಮಾಣಿಕ ಆರ್ ಭುರೆ
Published 6 ಡಿಸೆಂಬರ್ 2023, 5:30 IST
Last Updated 6 ಡಿಸೆಂಬರ್ 2023, 5:30 IST
ಬಸವಕಲ್ಯಾಣ ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯ ವಾಲ್ಮೀಕಿ ವೃತ್ತದಲ್ಲಿ ವಾಹನ ದಟ್ಟಣೆ ಆಗುತ್ತಿದೆ. ಜನರು ರಸ್ತೆಯೇ ಮೇಲೆಯೇ ನಿಂತಿರುವುದನ್ನು ಕಾಣಬಹುದು
ಬಸವಕಲ್ಯಾಣ ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯ ವಾಲ್ಮೀಕಿ ವೃತ್ತದಲ್ಲಿ ವಾಹನ ದಟ್ಟಣೆ ಆಗುತ್ತಿದೆ. ಜನರು ರಸ್ತೆಯೇ ಮೇಲೆಯೇ ನಿಂತಿರುವುದನ್ನು ಕಾಣಬಹುದು   

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯಲ್ಲಿನ ಐದು ಪ್ರಮುಖ ರಸ್ತೆಗಳನ್ನು ಸಂಧಿಸುವ ವಾಲ್ಮೀಕಿ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಇಲ್ಲಿ ರಸ್ತೆ ವಿಸ್ತರಣೆ ಮಾಡಲು ಹಾಗೂ ಬಸ್ ನಿಲ್ದಾಣ, ಪ್ರಯಾಣಿಕರ ತಂಗುದಾಣದ ವ್ಯವಸ್ ಮಾಡಲು ಜನರು ಆಗ್ರಹಿಸಿದ್ದಾರೆ.

ಇದು ದೊಡ್ಡ ಊರಾಗಿದ್ದು ತಾಲ್ಲೂಕಿನ ಮಧ್ಯ ಭಾಗದಲ್ಲಿದೆ. ಇದಲ್ಲದೆ ಪ್ರಮುಖ ನಗರಗಳಿಗೆ ಹೋಗುವ ರಸ್ತೆಗಳು ಇಲ್ಲಿ ಸಂಧಿಸುತ್ತವೆ. ಬಸವಕಲ್ಯಾಣದಿಂದ ಕಮಲಾಪುರ ಮತ್ತು ಕಲಬುರಗಿಗೆ ಹೋಗುವ ರಸ್ತೆ ಇಲ್ಲಿಂದಲೇ ಹಾದು ಹೋಗುತ್ತದೆ. ಮೈಸಲಗಾ, ಅಂಬಲಗಾ ಮೂಲಕ ಮಹಾಗಾಂವಕ್ಕೆ, ಹಾರಕೂಡ ಮೂಲಕ ಕೊಹಿನೂರ ಮತ್ತು ಸಲಗರಗೆ, ಹಿರೇನಾಗಾಂವ ಮತ್ತು ಖೇರ್ಡಾಕ್ಕೆ ಹಾಗೂ ಧನಗರವಾಡಿ ಮೂಲಕ ರಾಜೇಶ್ವರ ಮತ್ತು ಹುಮನಾಬಾದ್ ಗೆ ಸಂಚರಿಸುವ ವಾಹನಗಳು ಇಲ್ಲಿಂದಲೇ ಹೋಗುತ್ತವೆ.

ಹೀಗಾಗಿ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಬಸ್ ಹಾಗೂ ಇತರೆ ವಾಹನಗಳು ಯಾವಾಗಲೂ ನಿಂತಿರುತ್ತವೆ. ಪ್ರಯಾಣಿಕರು ಸಹ ರಸ್ತೆ ಬದಿಯಲ್ಲಿ ನಿಂತು ವಾಹನಗಳಿಗಾಗಿ ಕಾಯುತ್ತಿರುತ್ತಾರೆ. ಇದಲ್ಲದೆ ರಸ್ತೆಗಳ ಪಕ್ಕದಲ್ಲಿ ಹಣ್ಣು, ತರಕಾರಿ ಹಾಗೂ ಇತರೆ ವ್ಯಾಪಾರದ ಬಂಡಿಗಳು ಕೂಡ ಇರುತ್ತವೆ. ಈ ಕಾರಣ ವಾಹನ ಮತ್ತು ಜನರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.

ADVERTISEMENT

`ಕೆಲ ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಚಿಕ್ಕದಾಗಿದೆ. ವಾಹನಗಳು ನಿಲ್ಲುವ ಸ್ಥಳದಿಂದ ದೂರವಿದೆ. ಆದ್ದರಿಂದ ಜನರು ಬಸ್‌ಗಾಗಿ ಕಾಯುತ್ತ ರಸ್ತೆಯಲ್ಲಿಯೇ ನಿಲ್ಲಬೇಕಾಗುತ್ತಿದೆ. ಇಲ್ಲಿ ದೊಡ್ಡ ತಂಗುದಾಣ ಕಟ್ಟಬೇಕು' ಎಂದು ಗ್ರಾಮಸ್ಥರಾದ ಬಸವರಾಜ ಆಗ್ರಹಿಸಿದ್ದಾರೆ.

`ರಸ್ತೆ ಅಗಲವಿಲ್ಲ. ಆದರೆ ಮಧ್ಯದಲ್ಲಿ ವಿಭಜಕ ನಿರ್ಮಿಸಲಾಗಿದೆ. ಈ ಕಾರಣದಿಂದ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ಹತ್ತಾರು ವಾಹನಗಳು ನಿಲ್ಲುವಂತೆ ಬಸ್ ನಿಲ್ದಾಣ ಕಟ್ಟಬೇಕು' ಎಂದು ರಾಮಸಿಂಗ್ ರಾಠೋಡ ಒತ್ತಾಯಿಸಿದ್ದಾರೆ.

`ಗ್ರಾಮ ಪಂಚಾಯಿತಿಯಿಂದ ರಸ್ತೆ ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅವಕಾಶವಿಲ್ಲ. ಇತರೆ ಯಾವುದೇ ಅನುದಾನದಲ್ಲಿ ಈ ವ್ಯವಸ್ಥೆ ಮಾಡಬಹುದು. ಈ ಬಗ್ಗೆ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು' ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭು ಬಿರಾದಾರ ತಿಳಿಸಿದ್ದಾರೆ.

ಮುಡಬಿ ಹೋಬಳಿ ಕೇಂದ್ರವಾಗಿದೆ 5 ಪ್ರಮುಖ ರಸ್ತೆಗಳು ಸಂಧಿಸುತ್ತವೆ ಜನರು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ

ಬಸ್ ನಿಲ್ದಾಣ ನಿರ್ಮಾಣ ಮಾಡುವುದು ರಸ್ತೆ ಸಾರಿಗೆ ಸಂಸ್ಥೆಯದ್ದಾಗಿದೆ. ಆದರೂ ನಿಲ್ದಾಣ ಕಟ್ಟುವುದಕ್ಕೆ ಯೋಜನೆ ಕೈಗೊಂಡಿಲ್ಲ

-ಪ್ರಭು ಬಿರಾದಾರ ಪಿಡಿಒ ಮುಡಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.