ADVERTISEMENT

ಬ್ರಿಮ್ಸ್‌ಗೆ ಬರಲಿದೆ ಕ್ಯಾನ್ಸರ್‌ ಸೆಂಟರ್‌

ಬಿಡುವು ಕೊಟ್ಟ ಮಳೆ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:25 IST
Last Updated 16 ಆಗಸ್ಟ್ 2025, 7:25 IST
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು   

ಬೀದರ್‌: ದಟ್ಟ ಕಾರ್ಮೋಡದ ನಡುವೆ ನಗರದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಗುರುವಾರ ಸಂಜೆಯಿಂದ ತಡರಾತ್ರಿ ವರೆಗೆ ಎಡೆಬಿಡದೇ ಮಳೆ ಸುರಿದ ಪರಿಣಾಮ ಪ್ರಮುಖ ರಸ್ತೆಗಳು, ನಗರದ ನೆಹರೂ ಕ್ರೀಡಾಂಗಣದಲ್ಲಿ ನೀರು ಸಂಗ್ರಹಗೊಂಡಿತು. ಬೆಳಗಿನ ಜಾವ ಮಳೆ ನಿಂತ ನಂತರ, ಕ್ರೀಡಾಂಗಣದಿಂದ ನೀರು ತೆರವುಗೊಳಿಸಿ, ಮರಳು ಹಾಕಿ ಕ್ರೀಡಾಂಗಣ ಸಜ್ಜುಗೊಳಿಸಲಾಯಿತು. ದಟ್ಟ ಕಾರ್ಮೋಡ ಆವರಿಸಿಕೊಂಡಿತು. ಆದರೆ, ಮಳೆ ಬರಲಿಲ್ಲ.

ಜಿಲ್ಲಾಡಳಿತದಿಂದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗೌರವ ವಂದನೆ ಸ್ವೀಕರಿಸಿದರು. ಆನಂತರ ಪೊಲೀಸರು, ಗೃಹರಕ್ಷರು, ಮಹಿಳಾ ಪೊಲೀಸ್ ಪಡೆ, ಅಕ್ಕ ಪಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ಕೊನೆಯಲ್ಲಿ ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ADVERTISEMENT

ಕ್ಯಾನ್ಸರ್‌ ಸೆಂಟರ್‌:

ಇದಕ್ಕೂ ಮುನ್ನ ಈಶ್ವರ ಬಿ. ಖಂಡ್ರೆ ಮಾತನಾಡಿ, ಬೀದರ್‌ನ ಬ್ರಿಮ್ಸ್‌ನಲ್ಲಿ ಕ್ಯಾನ್ಸರ್‌ ಸೆಂಟರ್‌ ಆರಂಭಿಸಲು ನಿರ್ಧರಿಸಲಾಗಿದೆ. ಕೆಕೆಆರ್‌ಡಿಬಿಯಿಂದ ₹36 ಕೋಟಿ ಅನುದಾನ ನೀಡಲಾಗಿದೆ. ಶೀಘ್ರದಲ್ಲೇ ಟೆಂಡರ್‌ ಕರೆದು ಕೆಲಸಕ್ಕೆ ಚಾಲನೆ ನೀಡಲಾಗುವುದು. ಕ್ಯಾನ್ಸರ್‌ ಚಿಕಿತ್ಸೆಗೆ ಬೇರೆ ಕಡೆಗಳಿಗೆ ಹೋಗುವುದು ತಪ್ಪಲಿದೆ. ಸ್ಥಳೀಯವಾಗಿಯೇ ಚಿಕಿತ್ಸೆ ಸಿಗಲಿದೆ. ಕ್ಯಾಥ್‌ಲ್ಯಾಬ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಡಿಯೊಲಜಿಸ್ಟ್‌ ನಿವೃತ್ತಿ ಹೊಂದಿದ್ದರು. ಎರಡು ವರ್ಷ ಅವರ ಸೇವೆ ವಿಸ್ತರಿಸಲಾಗಿದೆ. ಅಗತ್ಯ ತಂತ್ರಜ್ಞರ ನೇಮಕ ಪ್ರಕ್ರಿಯೆಯೂ ನಡೆದಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಈಗಿರುವ ಫಲಿತಾಂಶಕ್ಕಿಂತ ಶೇ 10ರಷ್ಟು ಫಲಿತಾಂಶ ಹೆಚ್ಚಿಸಬೇಕು. ಅದಕ್ಕೆ ಏನೇನು ಬೇಕು ಎಲ್ಲ ಸೌಕರ್ಯ ಒದಗಿಸಲಾಗುವುದು. ಶಿಕ್ಷಕರ ಬೋಧನಾ ಹಾಗೂ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಣೆಗೆ ತರಬೇತಿ ನೀಡಲು ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಬೀದರ್‌ ಜಿಲ್ಲೆ ಎಲ್ಲದರಲ್ಲೂ ನಂಬರ್‌ ಒನ್‌ ಆಗಬೇಕೆ. ಇನ್ನು, ಶಿಥಿಲ ಶಾಲಾ ಕೊಠಡಿಗಳಿದ್ದರೆ ಅವುಗಳನ್ನು ನೆಲಸಮಗೊಳಿಸಬೇಕು ಎಂದು ಸೂಚನೆ ಕೊಡಲಾಗಿದೆ ಎಂದರು.

ಬೀದರ್‌ ತಾಲ್ಲೂಕಿನ ಹೊನ್ನಿಕೇರಿಯಲ್ಲಿ ಬರುವ ಆರು ತಿಂಗಳಲ್ಲಿ ಪರಿಸರ ಪ್ರವಾಸೋದ್ಯಮ ಕೆಲಸ ಪೂರ್ಣವಾಗಲಿದೆ. ಪಕ್ಷಧಾಮ ಸ್ಥಾಪನೆಯ ಸಂಬಂಧ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಸೂಚನೆ ಕೊಡಲಾಗಿದೆ. ಆ ವರದಿ ನೋಡಿಕೊಂಡು ಪಕ್ಷಿಧಾಮ ಸ್ಥಾಪನೆಗೆ ಕ್ರಮ ಜರುಗಿಸಲಾಗುವುದು. ಬೀದರ್‌ ಜಿಲ್ಲೆಯಾದ್ಯಂತ 2 ವರ್ಷ 3 ತಿಂಗಳಲ್ಲಿ 35 ಲಕ್ಷ ಸಸಿಗಳನ್ನು ನೆಡಲಾಗಿದೆ. ಇದು ನಿರಂತರವಾಗಿ ಮುಂದುವರೆಯಲಿದ್ದು, ಹಸಿರಿನ ಹೊದಿಕೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದರ ಬಗ್ಗೆ ಆರಂಭದಲ್ಲಿ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದವು. ಈಗ ಅವುಗಳ ಆಡಳಿತವಿರುವ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಯೋಜನೆಯ ಮಾದರಿ ಜಾರಿಗೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಜನರ ತಲಾ ಆದಾಯ ಹೆಚ್ಚಾಗಿದೆ. ರಾಜ್ಯ ಸುಭಿಕ್ಷವಾಗಿದೆ ಎಂದು ಅನೇಕ ಸಮೀಕ್ಷಾ ವರದಿಗಳೇ ಹೇಳಿವೆ ಎಂದರು.

ಪ್ರಸಕ್ತ ಸಾಲಿನಲ್ಲಿ ಕೆಕೆಆರ್‌ಡಿಬಿಯಿಂದ ಬೀದರ್‌ ಜಿಲ್ಲೆಗೆ ₹440 ಕೋಟಿ ಅನುದಾನ ಬಿಡುಗಡೆಯಾಗಲಿದೆ. ಸಲಹಾ ಸಮಿತಿ ಸಭೆ ಕರೆದು, ಎಲ್ಲ ಶಾಸಕರ ಅಭಿಪ್ರಾಯ ಆಲಿಸಿ, ಎರಡು ತಿಂಗಳಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಸದ ಸಾಗರ್ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಮ್ಯಾ ಮತ್ತಿತರರು ಇದ್ದರು.

ಬೀದರ್‌ನ ಓಲ್ಡ್‌ ಸಿಟಿಯಲ್ಲಿ ಶುಕ್ರವಾರ ಅಲ್‌ ಅಲ್ಮಾಸ್‌ ಶಾಲೆಯ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ರ್‍ಯಾಲಿ ನಡೆಸಿದರು -ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು
ಚಿಣ್ಣರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ಶಾಲಾ ಮಕ್ಕಳು ರೂಪಕ ಪ್ರಸ್ತುತಪಡಿಸಿದರು
ಅಂಗವಿಕಲ ವ್ಯಕ್ತಿಯೊಬ್ಬರು ಮೂರು ಚಕ್ರದ ಬೈಸಿಕಲ್‌ ಮೇಲೆ ತ್ರಿವರ್ಣ ಧ್ವಜ ಬಲೂನ್‌ಗಳೊಂದಿಗೆ ಬೀದರ್‌ನಲ್ಲಿ ಸಾಗಿದ್ದು ಹೀಗೆ

Quote - ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದೇಶದ ಅತಿದೊಡ್ಡ ಹಬ್ಬಗಳು. ಐಕ್ಯತೆ ಅಭಿಮಾನದಿಂದ ಆಚರಿಸಲಾಗುತ್ತದೆ. ಈ ರಾಷ್ಟ್ರದ ಸೇವೆಗೆ ಸಮರ್ಪಿಸಿಕೊಳ್ಳುವ ದಿನವೂ ಹೌದು. ತ್ರಿವರ್ಣ ಧ್ವಜ ಅನೇಕರ ತ್ಯಾಗ ಸಮರ್ಪಣೆಯ ಪ್ರತೀಕ. –ಈಶ್ವರ ಬಿ. ಖಂಡ್ರೆ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ

Cut-off box - ಬೀದರ್‌ ವಿವಿಗೆ ₹25 ಕೋಟಿ ಬೀದರ್‌ ವಿಶ್ವವಿದ್ಯಾಲಯದಲ್ಲಿ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕೆಕೆಆರ್‌ಡಿಬಿಯಿಂದ ₹25 ಕೋಟಿ ಅನುದಾನ ನೀಡಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಭಾಲ್ಕಿ ತಾಲ್ಲೂಕಿನ ಖಾನಾಪೂರದಲ್ಲಿ ₹31 ಕೋಟಿಯಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಇದರಿಂದ ಕಾರ್ಮಿಕರು ರೈತರ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

Cut-off box - ಜಿಲ್ಲಾಡಳಿತ ಕಟ್ಟಡಕ್ಕೆ ಚಾಲನೆ ಇಂದು ಬೀದರ್‌ ನಗರದ ಹಾಲಿ ಜಿಲ್ಲಾಧಿಕಾರಿ ಹಳೆ ಕಚೇರಿಯ ಜಾಗದಲ್ಲೇ ಹೊಸ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಶನಿವಾರ (ಆ.16) ಮಧ್ಯಾಹ್ನ 2ಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಗ ಔಪಚಾರಿಕವಾಗಿ ಪೂಜೆ ಮಾಡಿ ಚಾಲನೆ ನೀಡಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಜಾವೇದ್‌ ಕನ್‌ಸ್ಟ್ರಕ್ಶನ್ಸ್‌ಗೆ ಟೆಂಡರ್‌ ಅಂತಿಮಗೊಂಡಿದೆ. 18 ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

Cut-off box - ಮೂರು ತಾಲ್ಲೂಕುಗಳಲ್ಲಿ ಪ್ರಜಾಸೌಧ ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆಗೆ ಬೀದರ್‌ ಜಿಲ್ಲೆಯ ಚಿಟಗುಪ್ಪ ಕಮಲನಗರ ಹಾಗೂ ಹುಲಸೂರಿನಲ್ಲಿ ಹೊಸ ಪ್ರಜಾಸೌಧ ಕಟ್ಟಡ ನಿರ್ಮಿಸಲಾಗುವುದು. ಪ್ರತಿ ತಾಲ್ಲೂಕಿಗೆ ತಲಾ ₹8.50 ಕೋಟಿ ಮೀಸಲಿಡಲಾಗಿದೆ. ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ಕೊಡಲಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಭಾಲ್ಕಿ ಪುರಸಭೆ ಕಮಲನಗರ ಹಾಗೂ ಹುಲಸೂರ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

Cut-off box - 220 ಕೆವಿ 110 ಕೆವಿ ಹೊಸ ಸ್ಟೇಶನ್‌ ‘ಬೀದರ್‌ ಜಿಲ್ಲೆಯಲ್ಲಿ ಹೊಸದಾಗಿ 220 ಕೆವಿ ಹಾಗೂ 110 ಕೆವಿಯ ಆರು ಹೊಸ ವಿದ್ಯುತ್‌ ಸ್ಟೇಶನ್‌ಗಳು ಬರಲಿವೆ. ಈಗಾಗಲೇ ಟೆಂಡರ್‌ ಹಂತದಲ್ಲಿವೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಈ ಎಲ್ಲ ಸ್ಟೇಶನ್‌ಗಳು ನಿರ್ಮಾಣವಾದ ನಂತರ ಐದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಲಿದೆ. ನೆರೆಯ ಜಿಲ್ಲೆಗಳ ಜೊತೆಗೆ ಅನ್ಯ ರಾಜ್ಯಗಳಿಗೂ ವಿದ್ಯುತ್‌ ಮಾರಾಟ ಮಾಡಬಹುದು ಎಂದು ವಿವರಿಸಿದರು.

Cut-off box - ಬೀದರ್‌ನಲ್ಲಿ ಹೊಸ ಕ್ರೀಡಾಂಗಣ ‘ಬೀದರ್‌ನಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕಾಗಿ 20ರಿಂದ 25 ಎಕರೆ ಜಾಗ ಗುರುತಿಸಬೇಕು. ಮುಖ್ಯರಸ್ತೆಯ ಸಂಪರ್ಕ ಇರುವ ಜಾಗ ಗುರುತಿಸಲು ಸೂಚನೆ ಕೊಟ್ಟಿದ್ದೇನೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳು ಅದರಲ್ಲಿ ನಡೆಯಬೇಕು. ಆ ರೀತಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.